ಜಿಲ್ಲೆ

ಸೂರಗೊಂಡನಕೊಪ್ಪದಲ್ಲಿ 3 ದಿನ ಸೇವಾಲಾಲ್ ಜಯಂತಿ

ಚಿತ್ರದುರ್ಗ: ದಾವಣಗೆರೆ ಜಿಲ್ಲೆ ಬಾಯಾಗಡ್‌ನಲ್ಲಿ ಫೆ. 13ರಿಂದ 15ರವರೆಗೂ ಸಂತ ಸೇವಾಲಾಲ್ ಅವರ 285ನೇ ಜಯಂತಿ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾ ಭವನದ ಮುಂಭಾಗ ಜಯಂತಿಯ ಆಹ್ವಾನ ಪತ್ರಿಕೆಯನ್ನು ಬಂಜಾರ ಸಮುದಾಯದ ಮುಖಂಡರು ಬಿಡುಗಡೆಗೊಳಿಸಿದರು.

ಜಿಲ್ಲೆಯಿಂದ ಸಮುದಾಯದ ಸಾವಿರಾರು ಮಂದಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‌ಕುಮಾರ್ ಮನವಿ ಮಾಡಿದರು.

ಈ ಬಾರಿ ಅತ್ಯಂತ ವಿಶೇಷ ಹಾಗೂ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಎಸ್.ಎಸ್.ಮಲ್ಲಿಕಾರ್ಜುನ್ ಸೇರಿ ಅನೇಕ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಜಯಂತಿಗೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಉತ್ತರ ಭಾರತ ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಂತ ಸೇವಾಲಾಲ್ ಭಕ್ತರು ಆಗಮಿಸುತ್ತಿದ್ದು, ಪಾದಯಾತ್ರೆ ಮೂಲಕ ಬರುವವರು ಇಲ್ಲಿ ಯಾತ್ರೆ ಮುಕ್ತಾಯಗೊಳಿಸಲಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ರಾಜಾನಾಯ್ಕ, ನಾಗೇಂದ್ರನಾಯ್ಕ, ಮಂಜುನಾಯ್ಕ, ತಿಪ್ಪೇಸ್ವಾಮಿ, ಗಣೇಶ್‌ನಾಯ್ಕ, ರಮೇಶ್‌ನಾಯ್ಕ, ಚನ್ನಯ್ಯನಹಟ್ಟಿ ತಿಪ್ಪೇಶ್‌ನಾಯ್ಕ, ಜಯರಾಂ ನಾಯ್ಕ, ಪ್ರಕಾಶ್ ರಾಮನಾಯ್ಕ, ಮದಕರಿಪುರ ಕೃಷ್ಣನಾಯ್ಕ, ಹಾಲಾನಾಯ್ಕ, ಶಿವನಾಯ್ಕ, ಗೋವಿಂದನಾಯ್ಕ, ಭೀಮಸಮುದ್ರದ ಸುರೇಶ್, ತಿಪ್ಪೇಸ್ವಾಮಿ, ಆನಂದಕುಮಾರ್, ರಾಘ್ಯನಾಯ್ಕ ಇತರರಿದ್ದರು.