ಜಿಲ್ಲೆ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ: ಬೆಂಗಳೂರಿನ ಸಭೆಯಲ್ಲಿ ಆದ ತೀರ್ಮಾನವೇನು..?

ಕಾರವಾರ: ಉತ್ತರ ಕನ್ನಡ‌ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಬೇಡಿಕೆ ಸಂಬಂಧ ಮಂಗಳವಾರ ಬೆಂಗಳೂರಿನ ವಿಧಾನ ಸೌಧದ ಆರೋಗ್ಯ ಸಚಿವರ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ‌ ಹೆಬ್ಬಾರ,‌ ಶಾಸಕರಾದ ದಿನಕರ‌ ಶೆಟ್ಟಿ, ರೂಪಾಲಿ ನಾಯ್ಕ, ಎಂಎಲ್ ಸಿಗಳಾದ ಶಾಂತಾರಾಮ‌ ಸಿದ್ದಿ, ಗಣಪತಿ ಉಳ್ವೇಕರ್ ಇದ್ದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಆಧಿಕಾರಿಗಳು, ಕ್ರಿಮ್ಸ್ ಡೀನ್ ಡಾ.ಗಜಾನನ ನಾಯಕ, ಡಿಎಚ್ಒ ಡಾ.ಶರದ್ ನಾಯಕ ಜಿಲ್ಲೆಯ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಒದಗಿಸಿದರು.

ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರವಾರದ ಸರ್ಕಾರಿ‌ ಮೆಡಿಕಲ್‌ ಕಾಲೇಜ್ ಗೆ ಎಲ್ಲ ಮೂಲ ಸೌಕರ್ಯ ನೀಡಿ ಬಲಪಡಿಸಲಾಗುವುದು. ನಂತರ ಶಿರಸಿಯ ಸರ್ಕಾರಿ ಆಸ್ಪತ್ರೆಯನ್ನು ಬಲಪಡಿಸಲಾಗುವುದು. ಜಿಲ್ಲೆಯ ಕೇಂದ್ರ ಸ್ಥಾನ ಕುಮಟಾದಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಇದಕ್ಕೆ ಸಿಎಂ ಕೂಡ ಒಪ್ಪಿದ್ದಾರೆ. ಅಧಿವೇಶನ ಮುಗಿದು ಒಂದು ವಾರದ ಒಳಗೆ ಆರೋಗ್ಯ ಸಚಿವ ಕೆ.ಸುಧಾಕರ ಜಿಲ್ಲೆಗೆ ಆಗಮಿಸಿ ಇಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸುವರು ಎಂದು ಮಾಹಿತಿ ನೀಡಿದರು.