ರಾಯಚೂರು: ರೈತರು ಹೆಚ್ಚಾಗಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸುತ್ತಿರುವುದರಿಂದ ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಇದರಿಂದ ರೈತರಿಗೆ ಸೂಕ್ಷ್ಮ ನೀರಾವರಿ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿ ಸೂಕ್ಷ್ಮ ನೀರಿನ ಬಳಕೆಗೆ ಪ್ರೇರೇಪಿಸಬೇಕು ಎಂದು ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಹೇಳಿದರು.
ಸ್ಥಳೀಯ ಜಲ ನಿರ್ಮಲ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿರುವ ತೋಟಗಾರಿಕೆ ಬೆಳೆಗಳನ್ನು ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ಬೆಳೆಯುವಂತೆ ರೈತರಿಗೆ ಪ್ರೋತ್ಸಾಹಿಸಬೇಕು ಎಂದರು.
ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಕಾರಿಗಳು ತಾಲೂಕುವಾರು ಯೋಜನೆಯನ್ನು ರೂಪಿಸಿ ರೈತರಿಗೆ ಇಲಾಖೆಯಿಂದ ನೀಡಬಹುದಾದ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಒದಗಿಸಬೇಕು. ವಿವಿಧ ಬೆಳೆಗಳ ಬೇಸಾಯ ಪದ್ಧತಿಗಳ ಮಾಹಿತಿ ನೀಡಬೇಕು.
ರೈತರು ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಮೂಲಕ ತಮ್ಮ ಜಮೀನಿನಲ್ಲಿನ ಮಣ್ಣಿನ ಸತ್ವ ತಿಳಿದುಕೊಂಡು ಸೂಕ್ತ ಬೆಳೆಯನ್ನು ಬೆಳೆಯುವಂತೆ ಮಾಡಬೇಕು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮಾಹಿತಿಯನ್ನು ನೀಡುವ ಕೆಲಸ ಮಾಡಬೇಕು.
ಸರ್ಕಾರದ ಯೋಜನೆಗಳು, ಬೇಸಾಯ ಪದ್ಧತಿ, ವ್ಯವಸಾಯಕ್ಕೆ ಸಂಬಂಸಿದ ಮಾಹಿತಿಗಳನ್ನು ವಿಡಿಯೋ ಮೂಲಕ ರೈತರಿಗೆ ಮುಟ್ಟಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಇಲಾಖೆ ಅಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ರಾಹುಲ್ ತುಕಾರಾಮ್ ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಯೋಜನಾ ನಿರ್ದೇಶಕ ವಿ.ಪ್ರಕಾಶ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹ್ಮದ್ ಅಲಿ ಉಪಸ್ಥಿತರಿದ್ದರು.