ಜಿಲ್ಲೆ

ಸುಸ್ಥಿರ ಅಭಿವೃದ್ಧಿಯಿಂದ ಜೀವನಮಟ್ಟ ಸುಧಾರಣೆ

ಹುಬ್ಬಳ್ಳಿ ಯಾವುದೇ ಟೆನ್ಷನ್ ಇಲ್ಲದೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಆರೋಗ್ಯಕರವಾಗಿ ತಲುಪಲು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುವುದು ಅತಿ ಅವಶ್ಯ, ಸುಸ್ಥಿರ ಅಭಿವೃದ್ಧಿಗೂ ಇದು ಪೂರಕವಾಗಿದ್ದು ಜನರ ಜೀವನ ಮಟ್ಟ ಸುಧಾರಿಸಲಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದರು.

ಹುಬ್ಬಳ್ಳಿಯ ಹೊಸೂರಲ್ಲಿ ಹುಬ್ಬಳ್ಳಿ-ಧಾರವಾಡ ಬಿಆರ್​ಟಿಎಸ್ ಯೋಜನೆಯಡಿ ನಿರ್ವಿುಸಲಾದ ಬಸ್ ಟರ್ವಿುನಲ್, ಚಿಗರಿ ಬಸ್ ಓಡಾಟಕ್ಕೆ ಭಾನುವಾರ ಹಸಿರು ನಿಶಾನೆ ತೋರಿ ಲೋಕಾರ್ಪಣೆಗೊಳಿಸಿದ ನಂತರ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಮಹಾನಗರಗಳ ಮೆಟ್ರೋಗಳಿಗಿಂತಲೂ ಬಿಆರ್​ಟಿಎಸ್ ಉತ್ತಮ ವ್ಯವಸ್ಥೆಯಾಗಿದೆ. ನಿತ್ಯ 95 ಸಾವಿರ ಜನ ಚಿಗರಿಯಲ್ಲಿ ಸಂಚರಿಸುತ್ತಿದ್ದಾರೆ. ಇದು ‘ಮೆಟ್ರೋ ಆನ್ ರೋಡ್’. ತ್ವರಿತ ಹಾಗೂ ಸುರಕ್ಷಿತ ಸಾರಿಗೆಯನ್ನು ಜನರು ಹೆಚ್ಚು ಬಳಸಬೇಕು. ಅದರಿಂದ ಖಾಸಗಿ ವಾಹನಗಳ ಸಂಖ್ಯೆ ಕಡಿಮೆಯಾಗಿ ಪರಿಸರ ಮಾಲಿನ್ಯ ಕೂಡ ತಡೆಯಬಹುದು ಎಂದರು.

ಶೇ. 55 ಜನ ಈಗ ನಗರದಲ್ಲಿ ವಾಸವಾಗಿದ್ದಾರೆ. 2050ರ ವೇಳೆಗೆ ಇದರ ಪ್ರಮಾಣ ಶೇ. 68ಕ್ಕೆ ಏರಲಿದೆ ಎಂಬ ಅಂದಾಜಿದೆ. ಅದಕ್ಕೆ ತಕ್ಕಂತೆ ನಗರಗಳಲ್ಲಿ ಆಧುನಿಕ ಹಾಗೂ ಸುಸ್ಥಿರ, ಸುವ್ಯವಸ್ಥಿತ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಅಭಿವೃದ್ಧಿ ಕಾರ್ಯದಲ್ಲಿ ಜನ ಭಾಗಿಯಾಗಬೇಕು. ಕೇವಲ ಹಕ್ಕುಗಳಷ್ಟೇ ಅಲ್ಲ, ಕರ್ತವ್ಯಗಳನ್ನೂ ಜನ ಮರೆಯಬಾರದು ಎಂದು ಸಲಹೆ ನೀಡಿದರು.

ಕೇವಲ ಸೂಟು ಬೂಟು ಕೋಟು ಹಾಕಿಕೊಂಡರೆ ಸ್ಮಾರ್ಟ್ ಆಗುವುದಿಲ್ಲ, ಅದರೊಂದಿಗೆ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕಟ್ಟಡಕ್ಕೆ ಮಳೆನೀರು ಕೊಯ್ಲು, ಸೌರಶಕ್ತಿ ಬಳಕೆ ಕಡ್ಡಾಯಗೊಳಿಸಬೇಕು. ಬರೀ ಸರ್ಕಾರವೇ ಎಲ್ಲವನ್ನೂ ಮಾಡಲಿ ಎಂದು ಕುಳಿತುಕೊಳ್ಳಬಾರದು ಎಂದರು.

ಜನರು ಆರೋಗ್ಯಯುತವಾಗಿ ಜೀವನ ನಡೆಸಲು ಸೈಕಲ್ ಬಳಕೆಯನ್ನೂ ಮಾಡಬೇಕು. ನಗರದ ರಸ್ತೆಗಳಲ್ಲಿ ಕಡ್ಡಾಯವಾಗಿ ಸೈಕಲ್ ಟ್ರಾ್ಯಕ್ ಇರಬೇಕು, ಈ ಬಗ್ಗೆ ಸ್ಥಳೀಯ ಆಡಳಿತಗಳು ಯೋಚಿಸಬೇಕು, ಬಿಆರ್​ಟಿಎಸ್ ಕಾರಿಡಾರ್ ಚಿಗರಿಗೆ ಮೀಸಲಾಗಿದೆ. ಅಲ್ಲಿ ಅನ್ಯ ವಾಹನ ಪ್ರವೇಶ ಮಾಡಬಾರದು, ನಿಯಮ ಪಾಲನೆ ಮಾಡಬೇಕು ಎಂದು ಸೂಚಿಸಿದರು.

2018ರ ರಾಷ್ಟ್ರೀಯ ನಗರ ನೀತಿ ರೂಪಿಸುವಾಗ ಸಮಗ್ರ ದೃಷ್ಟಿಕೋನ ಪಾಲಿಸಲಾಗಿದೆ. ನಗರಾಭಿವೃದ್ಧಿ ರಾಜ್ಯ ಪಟ್ಟಿಯ ವಿಷಯವಾಗಿರುವುದರಿಂದ ರಾಜ್ಯಗಳು ತಮ್ಮದೇ ಆದ ಕಾರ್ಯಕ್ರಮಗಳ ಮೂಲಕ ಸುಂದರ ನಗರ ನಿರ್ವಿುಸಬೇಕು. ಸ್ಥಳೀಯ ಸಂಸ್ಥೆಗಳು ಹೊಸ ಆಸ್ತಿಗಳನ್ನು ಸೃಷ್ಟಿಸುವ ಬದಲು ಇರುವ ಆಸ್ತಿಗಳ ನಿರ್ವಹಣೆ, ಲಭ್ಯ ಸಂಪನ್ಮೂಲಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಶೇ. 70 ಜನರಿಗೆ ಅನುಕೂಲ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಇಂದಿಗೂ ಶೇ. 70ರಷ್ಟು ಜನ ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಬಿಆರ್​ಟಿಎಸ್ ಯೋಜನೆಯನ್ನು ಲೋಪದೋಷ ನಿವಾರಿಸಿಕೊಂಡು ಜಾರಿ ಮಾಡಲಾಗಿದೆ. ಇನ್ನಷ್ಟು ಸಣ್ಣ ಪುಟ್ಟ ಕಾಮಗಾರಿಗಳು ಆಗಬೇಕಿವೆ. ಜಾಗ ಬಿಟ್ಟು ಕೊಟ್ಟ ಅನೇಕರಿಗೆ ಬೇಸರವಾಗದಂತೆ ಬಾಕಿ ಇರುವ ಕಡೆ ದೃಢ ನಿರ್ಧಾರ ಕೈಗೊಂಡು ಯೋಜನೆ ಪೂರ್ಣ ಮಾಡಬೇಕು ಎಂದು ಸೂಚ್ಯವಾಗಿ ಹೇಳಿದರು. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಸಿ.ಎಂ. ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್.ವಿ. ಸಂಕನೂರ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಇತರರು ಇದ್ದರು. ಬಿಆರ್​ಟಿಎಸ್ ಯೋಜನೆ ಕುರಿತ ಕಿರುಚಿತ್ರ ಪ್ರದರ್ಶಿಸಲಾಯಿತು. ನಗರ ಭೂಸಾರಿಗೆ ನಿರ್ದೇಶನಾಲಯ ಆಯುಕ್ತ ವಿ. ಪೊನ್ನುರಾಜ ಸ್ವಾಗತಿಸಿದರು. ಬಿಆರ್​ಟಿಎಸ್ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ವಂದಿಸಿದರು.

ಯೋಜನೆಗೆ ಶ್ರಮಿಸಿದವರಿಗೆ ಕೃತಜ್ಞತೆ ಅಧ್ಯಕ್ಷತೆ ವಹಿಸಿದ್ದ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಬಿಆರ್​ಟಿಎಸ್ ನಮ್ಮೆಲ್ಲರ ಕನಸಿನ ಕೂಸು, ಇಂದು ಉದ್ಘಾಟನೆಯಾಗಿರುವುದು ಸಂತಸ ತಂದಿದೆ ಎಂದು ಯೋಜನೆ ಜಾರಿಗೆ ಶ್ರಮಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. 2012ರಲ್ಲಿ ನಾನು ಸಿಎಂ ಆಗಿದ್ದ ಅವಧಿಯಲ್ಲಿ ಯೋಜನೆ ರೂಪಿಸಲಾಯಿತು. ಹಿಂದೆ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ವೆಂಕಯ್ಯ ನಾಯ್ಡು ಅವರು ವಿಶೇಷ ಪೋ›ತ್ಸಾಹ ನೀಡಿದರು. ಜೆ ನಮ್ರ್ ಯೋಜನೆಯಡಿ ಬಸ್ ಖರೀದಿಗೆ 70 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಇಂದು ಉಪರಾಷ್ಟ್ರಪತಿಯಾಗಿ ಲೋಕಾರ್ಪಣೆ ಮಾಡಿರುವುದು ಸಂತಸ ತಂದಿದೆ ಎಂದರು. ಬಿಆರ್​ಟಿಎಸ್ ಕಂಪನಿ ಎಂ.ಡಿ. ಪದೇ ಪದೆ ಬದಲಾವಣೆಯಿಂದ ಯೋಜನೆ ಜಾರಿ ವಿಳಂಬವಾಯಿತು. ಸಾಕಷ್ಟು ಟೀಕೆ ಎದುರಿಸಬೇಕಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.