ಜಿಲ್ಲೆ

ಸುಸ್ಥಿರ ಅಭಿವೃದ್ಧಿಗೆ ಎನ್‌ಎಸ್‌ಎಸ್ ಮಾತ್ರ ಮಹತ್ವ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ, ಸುಸ್ಥಿರ ಅಭಿವೃದ್ಧಿಗಾಗಿ ಎನ್‌ಎಸ್‌ಎಸ್ ಪಾತ್ರ ಬಹಳ ಮಹತ್ವ ಪಡೆದಿದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಸಚಿವ ಯಶಪಾಲ ಕ್ಷೀರಸಾಗರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ 7 ದಿನಗಳ ಕಾಲ ಏರ್ಪಡಿಸಿರುವ ವಿವಿ ಮಟ್ಟದ ನಾಯಕತ್ವ ತರಬೇತಿ ಶಿಬಿರಕ್ಕೆ ಗಾಂಧಿ ಭವನದಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪ್ರಯತ್ನಪಟ್ಟರೆ ಎಲ್ಲ ಕೆಲಸ ಸಾಧ್ಯ. ಕಠಿಣ ಪರಿಶ್ರಮ ಸತತ ಅಧ್ಯಯನದಿಂದ ಗುರಿ ಸಾಧಿಸಬಹುದು. ಪಠ್ಯದ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಭಾರತಕ್ಕೆ ಯುವ ಶಕ್ತಿ ಬಲಿಷ್ಠವಾಗಿದೆ. ನಾಯಕತ್ವ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದ ಅವರು, ಕೆಲಸವನ್ನು ಮನಪೂರ್ವಕವಾಗಿ ಮಾಡಬೇಕು ಎಂದರು.
ಕವಿವಿ ಎನ್‌ಎಸ್‌ಎಸ್ ಕೋಶದ ಸಂಯೋಜಕ ಡಾ. ಎಂ.ಬಿ.ದಳಪತಿ ಮಾತನಾಡಿ, ಕವಿವಿ ಉನ್ನತ ಶಿಕ್ಷಣದ ಜತೆಗೆ ಸಾಮಾಜಿಕ ಮತ್ತು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ. ರಾಷ್ಟ್ರೀಯ ಸೇವಾ ಯೋಜನೆ ಭಾರತ ಸರ್ಕಾರದ ಮಹತ್ವದ ಯೋಜನೆ ಎಂದರು.
ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಸಿ. ಕೃಷ್ಣಮೂರ್ತಿ ಮಾತನಾಡಿ, ನಾಯಕತ್ವದ ಗುಣಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಎನ್‌ಎಸ್‌ಎಸ್ ಚಟುವಟಿಕೆಗಳಿಂದ ನಾಯಕತ್ವದ ಜತೆಗೆ ವ್ಯಕ್ತಿತ್ವ ವಿಕಸನ ಮತ್ತು ದೇಶದ ಬೆಳವಣಿಗೆಗೆ ಸಹಕಾರಿ ಆಗಿದೆ. ಪಠ್ಯೇತರ ಚಟುವಟಿಕೆಗಳಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡಬೇಕು ಎಂದರು.
ಡಾ. ಸುರೇಶ ನ್ಯಾಮತಿ, ಡಾ. ಎಂ.ಎಚ್. ನಧಾಫ, ಡಾ. ನಾಗರಾಜ ತಳವಾರ, ವಿವಿಧ ಕಾಲೇಜುಗಳ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳು, ಸ್ವಯಂ ಸೇವಕರು ಭಾಗವಹಿಸಿದ್ದರು.