ಜಿಲ್ಲೆ

ಸುವರ್ಣಸೌಧ ಮುತ್ತಿಗೆ ಚಲೋ 9ಕ್ಕೆ

ಚಿತ್ರದುರ್ಗ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧಕ್ಕೆ ಡಿ. 9ರಂದು ಮುತ್ತಿಗೆ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಲಿಂಗಾವರಹಟ್ಟಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆ ಹಿಂಪಡೆಯಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಗೋಮಾಳ, ಅರಣ್ಯ ಭೂಮಿ, ಬಗರ್ ಹುಕುಂ, ಹುಲ್ಲು ಬನ್ನಿ ಖರಾಬು, ಸೇಂಧಿ ವನದಲ್ಲಿ ಸಾಗುವಳಿ ಮಾಡಿರುವ ಎಲ್ಲ ರೈತರಿಗೆ ಹಕ್ಕು ಪತ್ರ ನೀಡಬೇಕು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಜಿಲ್ಲೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಮೊದಲಿನಂತೆ ಅಕ್ರಮ-ಸಕ್ರಮದಡಿ ನೀಡಬೇಕು. ಅತಿವೃಷ್ಟಿಗೆ ಹಾನಿಯಾಗಿರುವ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಬೆಳೆ ವಿಮೆ ಪಾವತಿಸಿದವರಿಗೆ ಮುಂಗಾರು ವಿಮೆ ಜಮೆಗೆ ಕ್ರಮವಹಿಸಬೇಕು. ಈ ಎಲ್ಲ ಬೇಡಿಕೆ ಈಡೇರಿಕೆಗಾಗಿ ಮುತ್ತಿಗೆ ಚಲೋಗೆ ತೀರ್ಮಾನಿಸಲಾಗಿದೆ ಎಂದರು.

ಪದಾಧಿಕಾರಿಗಳಾದ ಶಿವಮೂರ್ತಿ, ಮಂಜುಳಾ, ಲೋಲಾಕ್ಷಮ್ಮ, ನಾಗರಾಜ್ ಕೆರೆಯಾಗಳಹಳ್ಳಿ, ಸೈಯದ್ ಮಮ್ತಾಜ್, ಕೆಂಚಪ್ಪ ನಾಯಕ, ಓಂಕಾರಪ್ಪ, ಜಯಲಕ್ಷ್ಮೀ, ರಮೇಶ್ ಗುಂಡೂರು, ಶಶಿಕಲಾ ಇತರರಿದ್ದರು.