ವಿದ್ಯಾಗಿರಿ ವಿಪ್ರ ರಾಯರ ಮಠದದ ಆವರಣದಲ್ಲಿರುವ ಮಹಾಸಭೆ ಜಿಲ್ಲಾ ಕಚೇರಿಯಲ್ಲಿ ಮಹಾಸಭೆ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಮಾತನಾಡಿದರು. ಪಂ.ಬಿAಧುಮಾಧವಾಚಾರ್ಯ ನಾಗಸಂಪಗಿ, ರಾಜ್ಯ ಪದಾಧಿಕಾರಿಗಳಾದ ಕಾರ್ತಿಕ ಬಾಪಟ್, ವಿಜಯೇಂದ್ರ ನಾಡಜೋಶಿ, ಸುಧಾಕರ ಬಾಬು ಮತ್ತಿತರರು ಚಿತ್ರದಲ್ಲಿದ್ದಾರೆ. 
ಜಿಲ್ಲೆ

ಸುವರ್ಣ ಮಹೋತ್ಸವ : ಸಮ್ಮೇಳನ ಯಶಸ್ವಿಗೆ ಕರೆ

ಬಾಗಲಕೋಟೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ವಿಪ್ರರ "ವಿಶ್ವಾಮಿತ್ರ" ಸಮ್ಮೇಳನದಲ್ಲಿ ತ್ರಿಮತಸ್ಥ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜದ ಒಗ್ಗಟ್ಟು ಪ್ರದರ್ಶಿಸಬೇಕೆಂದು ಮಹಾಸಭೆ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಕರೆ ನೀಡಿದರು.

ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ರಾಯರಮಠ ಆವರಣದಲ್ಲಿರುವ ಮಹಾಸಭೆಯ ಜಿಲ್ಲಾ ಕಚೇರಿಯಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜ.೧೮ ಮತ್ತು ಜ.೧೯ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ತ್ರಿಮತಸ್ಥ ಯತಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಲಿದ್ದಾರೆ. ಸಮಾಜದ ಒಗ್ಗಟ್ಟು ಪ್ರದರ್ಶಿಸಲು ದೊಡ್ಡ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವಂತೆ ಕೋರಿದರು.

ಸಮ್ಮೇಳನಕ್ಕೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ರಾಜಸ್ಥಾನ ಮುಖ್ಯಮಂತ್ರಿ ಭಜನಲಾಲ್ ಶರ್ಮಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಸಚಿವ ದಿನೇಶ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಗಣ್ಯರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಮ್ಮೇಳನ ಪ್ರಯುಕ್ತ ೨೪ ಕೋಟಿ ಗಾಯತ್ರಿ ಜಪ ಪಠಣೆಗೆ ಕರೆ ನೀಡಲಾಗಿದೆ. ಸಮ್ಮೇಳನದ ದಿನದಂದು ೧ ಲಕ್ಷ ಗಾಯತ್ರಿ ಜಪಯಜ್ಞ ಕೈಗೊಳ್ಳಲಾಗುತ್ತಿದೆ . ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಉಟೋಪಚಾರಕ್ಕಾಗಿ ಕುಂದಾಪುರದ ೫೦ ಬಾಣಸಿಗರ ತಂಡ ಕೆಲಸ ಮಾಡಲಿದೆ ಎಂದರು.

೧೨೫ ಮಳಿಗೆಗಳನ್ನು ವ್ಯಾಪಾರ ವಹಿಟವಾಟಿಗಾಗಿ ಸ್ಥಾಪಿಸಲಾಗುತ್ತಿದೆ, ಮಹಿಳಾ ಘಟಕದ ಸಾರಥ್ಯದಲ್ಲಿ ಭಗವದ್ಗೀತೆ ಸ್ಪರ್ಧೆ ಸಂಘಟಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತ್ರಿಮತಸ್ಥರನ್ನು ಒಟ್ಟುಗೂಡಿಸಲು ಗಾಯತ್ರಿ ಜಪವು ದಿವ್ಯಮಂತ್ರವಾಗಿದೆ. ಈ ಬಾರಿ ಸಮಾಜದ ಒಗ್ಗಟ್ಟು ಪ್ರದರ್ಶಿಸಿ ಬ್ರಾಹ್ಮಣ ಸಮಾಜದ ಶಕ್ತಿ ಪ್ರದರ್ಶಿಸಬೇಕಿದೆ. ಸಮ್ಮೇಳನಕ್ಕೆ ಆಗಮಿಸುವ ಜನಕ್ಕೆ ಸಕಲ ರೀತಿಯಿಂದಲೂ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಾಗಲಕೋಟೆ ಜಿಲ್ಲೆಯಿಂದ ವಿಪ್ರರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಹ್ವಾನಿಸಿದರು.

ಪಂ.ಬಿAದುಮಾಧವಾಚಾರ್ಯ ನಾಗಸಂಪಿಗೆ ಅವರು ಮಾತನಾಡಿ, ವಿಪ್ರರು ಎಂದರೆ ವಿಶೇಷ ಪ್ರಗತಿಯ ಸಂಕೇತ. ನಾವು ವಿಶ್ವಕ್ಕೆ ಮಿತ್ರರಾದವರು. ಸಮ್ಮೇಳನದಲ್ಲಿ ಬಾಗಲಕೋಟೆ ಜಿಲ್ಲೆಯಿಂದ ದೊಡ್ಡ ಸಂಖ್ಯೆಯಲ್ಲಿ ಜನ ತೆರಳಿ ಭಾಗಿಯಾಗೋಣ ಎಂದರು.

ಸಭೆಯಲ್ಲಿ ಉದ್ಯಮಿ ಸಿ.ಎನ್.ದಾಸ್ ಅವರ ಅಗಲಿಕೆಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಮಹಾಸಭೆ ರಾಜ್ಯ ಪದಾಧಿಕಾರಿಗಳಾದ ಕಾರ್ತಿಕ ಬಾಪಟ್, ವಿಜಯೇಂದ್ರ ನಾಡಜೋಶಿ, ಸುಧಾಕರ ಬಾಬು, ಡಾ.ಗಿರೀಶ ಮಸೂರಕರ, ಟಿ.ಎಚ್.ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿ ಎಸ್.ಕೆ.ಕುಲಕರ್ಣಿ,  ಜಿಲ್ಲಾ ಉಪಾಧ್ಯಕ್ಷ ಸಂತೋಷ ಗದ್ದನಕೇರಿ, ಮಹಿಳಾ ಘಟಕದ ಅಧ್ಯಕ್ಷೆ ಶುಭದಾ ದೇಶಪಾಂಡೆ, ಅಂಬಿಕಾ ಜೋಶಿ, ವಿನಾಯಕ ತಾಳಿಕೋಟಿ, ಪ್ರದೀಪ್ ಪರ್ವತಿಕರ, ಡಾ.ರಾಜೇಂದ್ರ ಜೋಶಿ, ಅನಂತ ಮಳಗಿ, ಭಾಸ್ಕರ ಮನಗೂಳಿ, ರಾಘವೇಂದ್ರ ಗುಮಾಸ್ತೆ, ಗಿರಿಯಾಚಾರ್ಯ, ಎಸ್.ವಿ.ದೇಸಾಯಿ, ಡಾ.ರಾಜೇಂದ್ರ ಜೋಶಿ, ರಾಘವೇಂದ್ರ ಕುಲಕರ್ಣಿ, ಆನಂದ ಕಲಕೇರಿ ಇತರರು ಇದ್ದರು