ಮೈಸೂರು: ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಶಾಲಾ-ಕಾಲೇಜಿನಿಂದಲೇ ಶುರುವಾಗಲಿ, ಶೈಕ್ಷಣಿಕ ರಂಗಭೂಮಿ ಚಟುವಟಿಕೆ ರಾಜ್ಯಾದ್ಯಂತ ನಡೆಯಲಿ, ಕನ್ನಡದ ಮನಸ್ಸುಗಳನ್ನು ಬೆಸೆಯುವ ಕೆಲಸವಾಗಲಿ, ಏಕೀಕರಣದ ಮಹನೀಯರನ್ನು ಪರಿಚಯಿಸಿ, ವಿಶ್ವಮಾನವ ಮತ್ತು ಸರ್ವಜನಾಂಗದ ಶಾಂತಿಯ ತೋಟ ಸಂದೇಶ ಎಲ್ಲೆಡೆ ಮೊಳಗಲಿ…
‘ಸುವರ್ಣ ಕರ್ನಾಟಕ ಮಹೋತ್ಸವ’ ಆಚರಣೆ ಸಂಬಂಧ ಮೈಸೂರು ವಿಭಾಗೀಯ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಕೇಳಿಬಂದ ಪ್ರಮುಖ ಸಲಹೆಗಳಿವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಕಿರು ರಂಗಮಂದಿರದಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ ಸಾಹಿತಿಗಳು, ರಂಗಕರ್ಮಿಗಳು ಹಾಗೂ ಕಲಾವಿದರ ಸಲಹೆ-ಸೂಚನೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಸ್ವೀಕರಿಸಿದರು. ಮೈಸೂರು ವಿಭಾಗದ ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಂದ ಬಂದಿದ್ದ ಸಾಂಸ್ಕೃತಿಕ ಲೋಕದ ಪ್ರತಿನಿಧಿಗಳು ಒಬ್ಬೊಬ್ಬರಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. ಬಳಿಕ ಲಿಖಿತ ಸಲಹೆಯನ್ನೂ ಸ್ವೀಕರಿಸಲಾಯಿತು.
ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಮಾತನಾಡಿ, ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್‌ನ ಸಹಯೋಗದಲ್ಲಿ ನಡೆಯಲಿ. ಕುವೆಂಪು ಅವರ ‘ವಿಶ್ವಮಾನವ’ ಮತ್ತು ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಸಂದೇಶದ ಪರಿಕಲ್ಪನೆಯಡಿ ರೂಪಗೊಳ್ಳಲಿ. ಕನ್ನಡದ ಮನಸ್ಸುಗಳಲ್ಲಿ ವೈಚಾರಿಕತೆ, ಸಾಂಸ್ಕೃತಿಕತೆ ಬಿತ್ತಬೇಕು. ಶಾಲಾ-ಕಾಲೇಜಿನಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿ ಕನ್ನಡದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಕುವೆಂಪು ನಾಟಕೋತ್ಸವ ಮಾಡಬೇಕು. ಕನ್ನಡ ಮತ್ತು ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತು ವಿಚಾರ ಸಂಕಿರಣ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಕರ್ನಾಟಕವೆಂದು ನಾಮಕರಣ ಮಾಡಿದ ಡಿ.ದೇವರಾಜ ಅರಸು ಕುರಿತು ರಾಜ್ಯಾದ್ಯಂತ ವಿಚಾರ ಸಂಕಿರಣ ಹಮ್ಮಿಕೊಳ್ಳಬೇಕು. ದೇಶದಲ್ಲಿ ನಿರ್ಮಾಣವಾಗಿರುವ ಆತಂಕ ನಿವಾರಣೆಗಾಗಿ ‘ಸೌಹಾರ್ದ ಕರ್ನಾಟಕ’ ಹೆಸರಿನಲ್ಲಿ ಮನಸ್ಸುಗಳ ಬೆಸುಗೆಗಾಗಿ ಜಾಗೃತಿ ಜಾಥಾ, ಮಲ ಹೊರುವ ಪದ್ಧತಿ, ಜೀತಪದ್ಧತಿ ನಿರ್ಮೂಲನೆ ಕಾಯ್ದೆ, ದೇವರಾಜ ಅರಸು ಅವರಿಂದ ಸಿದ್ದರಾಮಯ್ಯ ಸರ್ಕಾರದವರೆಗೆ ತಂದಿರುವ ಜನಪರ ಯೋಜನೆಗಳ ಕುರಿತು ಗೋಡೆ ಬರಹವನ್ನು ಬರೆಸಬೇಕು ಎಂದು ಸಲಹೆ ನೀಡಿದರು.
ರಂಗಕರ್ಮಿ ಪ್ರಸನ್ನ ಮಾತನಾಡಿ, ಉತ್ತರ ಕರ್ನಾಟಕವನ್ನು ದಕ್ಷಿಣ ಕರ್ನಾಟಕದವರಿಗೆ ಪರಿಚಯಿಸಬೇಕು. ಈ ರೀತಿ ವಿವಿಧ ಪ್ರಾಂತ್ಯಗಳ ಪರಿಚಯಾತ್ಮಕ ಕಾರ್ಯದ ಮೂಲಕ ಕೊಡು-ಕೊಳ್ಳುವ ಕೆಲಸವಾಗಲಿ. ತಮಿಳು, ಹಿಂದಿ, ಉರ್ದು ಸೇರಿದಂತೆ ಅನ್ಯಭಾಷೆ ವಿರೋಧಕ್ಕೆ ಅವಕಾಶ ನೀಡಬಾರದು. ಮಕ್ಕಳಲ್ಲಿ ಕನ್ನಡ ಉಳಿಸಲು ಶೈಕ್ಷಣಿಕ ರಂಗಭೂಮಿ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ಮಂಡಿಸಿದರು.
ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಯುವ ಪೀಳಿಗೆಗೆ ಕರ್ನಾಟಕ ಏಕೀಕರಣ ರೂವಾರಿಗಳನ್ನು ಪರಿಚಯಿಸಬೇಕು. ಪ್ರಮುಖ ಸಾಹಿತಿಗಳು ರಚಿಸಿರುವ ಕನ್ನಡ ಗೀತಗಾಯನದ ವ್ಯವಸ್ಥೆ, ಕನ್ನಡ ಕುರಿತು ನಾಟಕೋತ್ಸವ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಕವಯಿತ್ರಿ ಲತಾ ರಾಜಶೇಖರ್ ಮಾತನಾಡಿ, ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಸುವರ್ಣ ಕನ್ನಡ ಭವನ ನಿರ್ಮಿಸಬೇಕು. ಗಡಿನಾಡಿನ ಕನ್ನಡ ಶಾಲೆ ಉಳಿಸಬೇಕು. ಕನ್ನಡದ ಶ್ರೇಷ್ಠ ಕೃತಿಗಳನ್ನು ಅನ್ಯಭಾಷೆಗಳಿಗೆ ತರ್ಜುಮೆ ಮಾಡಬೇಕು. ಜಿಲ್ಲಾ, ರಾಜ್ಯಮಟ್ಟದಲ್ಲಿ ಸುವರ್ಣ ಪ್ರಶಸ್ತಿ ನೀಡಬೇಕು ಎಂದು ಸಲಹೆ ನೀಡಿದರು.
ಅರಸು ಜಾಗೃತಿ ವೇದಿಕೆಯ ಡಾ.ಎಂ.ಜಿ.ಆರ್.ಅರಸು ಮಾತನಾಡಿ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಡಿ.ದೇವರಾಜ ಅರಸು ಅವರ ಸ್ಮರಣೆ ಮಾಡಬೇಕು. ತವರು ಜಿಲ್ಲೆ ಮೈಸೂರಿನಲ್ಲಿ ಅವರ ಪ್ರತಿಮೆ ಸ್ಥಾಪನೆ ಮಾಡಬೇಕೆಂಬ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ರಂಗಕರ್ಮಿ ಸಿ.ಬಸವಲಿಂಗಯ್ಯ ಮಾತನಾಡಿ, ಗೋವಿಂದ ಪೈ, ಕುವೆಂಪು, ಜಿ.ಎಸ್.ಶಿವರುದ್ರಪ್ಪ ಹೊರತುಪಡಿಸಿ ಮತ್ತೊಬ್ಬರಿಗೆ ರಾಷ್ಟ್ರಕವಿ ಗೌರವ ಪ್ರದಾನ ಮಾಡಿಲ್ಲ. ಆ ಕೆಲಸವಾಗಬೇಕು. ರಾಷ್ಟ್ರಕವಿಗಳ ಸ್ಮರಣೆ ಆಗಬೇಕು ಎಂದರು.
ಸಭೆಯಲ್ಲಿ ರಂಗಕರ್ಮಿಗಳಾದ ಎಚ್.ಜನಾರ್ದನ್(ಜನ್ನಿ), ಮಂಡ್ಯ ರಮೇಶ್, ಬಿ.ಎಂ.ರಾಮಚಂದ್ರ, ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ, ಪ್ರೊ. ಕಾಳೇಗೌಡ ನಾಗವಾರ ಸೇರಿದಂತೆ ಹಲವರು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ್ ಹಿರೇಮಠ್, ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಅಧಿಕಾರಿಗಳಾದ ಮಧುಸೂದನ್ ಇನ್ನಿತರರಿದ್ದರು