ಸಿಂದಗಿ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವಿವಿಧ ಮೊರ್ಚಾಗಳ ಸಂಯುಕ್ತ ಸಮಾವೇಶಕ್ಕೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಈರಣ್ಣ ರಾವೂರ, ವಿವೇಕ ಡಬ್ಬಿ ಇತರರಿದ್ದರು. 
ಜಿಲ್ಲೆ

ಸುಳ್ಳು ಹೇಳಿ ಸರ್ಕಾರ ತರಬಹುದೆಂದು ತಿಳಿದಿರಲಿಲ್ಲ

ಸಿಂದಗಿ: ರಾಜ್ಯದಲ್ಲಿ ಸುಳ್ಳು ಹೇಳಿ ಒಂದು ಸರ್ಕಾರವನ್ನು ಅಸ್ತಿತ್ವಕ್ಕೆ ತರಬಹುದು ಎಂಬುದೇ ತಮಗೆ ತಿಳಿದಿರಲಿಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.

ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ವಿವಿಧ ಮೊರ್ಚಾಗಳ ಸಂಯುಕ್ತ ಸಮಾವೇಶಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರಂತೆ ರಾಜ್ಯದ ಜನರಿಗೆ ಗ್ಯಾರಂಟಿಗಳ ಬಗ್ಗೆ ಸುಳ್ಳು ಹೇಳಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಕುರಿತು ತಮಗೆ ಹೊಳೆಯಲೇ ಇಲ್ಲ. ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ, ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಸಿಗಬೇಕಿದ್ದ ಬಜೆಟ್ ಮೀಸಲು ಹಣ 11,500 ಕೋಟಿ ರೂ. ವನ್ನು ಗ್ಯಾರಂಟಿಗಳಿಗೆ ವಿನಿಯೋಗಿಸುವ ಮೂಲಕ ಆ ಸಮುದಾಯಗಳಿಗೆ ನೇರವಾಗಿ ಶಾಸನಬದ್ಧ ಹಕ್ಕಿನಿಂದ ವಂಚನೆ ಮತ್ತು ಮೋಸ ಮಾಡಿದೆ. ಅಲ್ಲದೆ ಆಯಾ ಕ್ಷೇತ್ರಗಳ ಅಭಿವೃದ್ಧಿಯ ಶಾಸಕರ ಶಾಸನಬದ್ಧ ಅನುದಾನ 2 ಕೋಟಿ ರೂ. ನಿಧಿಗೂ ಗ್ಯಾರಂಟಿ ಪೆಟ್ಟು ಬಿದ್ದಿದೆ ಎಂದು ಆರೋಪಿಸಿದರು.

ಕೇಂದ್ರದ ಯುಪಿಎ ಸರ್ಕಾರದ ಅವಧಿಯಲ್ಲಿಯೇ ಆಹಾರ ಭದ್ರತೆ ಕಾಯ್ದೆ ಜಾರಿಗೆ ಬಂದಿತ್ತು. 2014ರಲ್ಲಿ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ನಂತರದಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಯೋಜನೆಯಡಿ ದೇಶದ 80 ಕೋಟಿ ಜನರಿಗೆ ಇಂದಿಗೂ 5 ಕೆಜಿ ಉಚಿತ ಅಕ್ಕಿಯನ್ನು ನೀಡಲಾಗುತ್ತಿದೆ. ಅದರಲ್ಲಿ ರಾಜ್ಯಕ್ಕೆ 22 ಲಕ್ಷ ಕ್ವಿಂಟಾಲ್ ನೀಡುತ್ತಿದೆ. ಇದು ಸುಳ್ಳಾದರೆ ಸಿಎಂ ಸಿದ್ದರಾಮಯ್ಯ ಇದನ್ನು ಅಲ್ಲಗೆಳೆಯಲಿ ಎಂದು ತಾಕತ್ತಿನ ಸವಾಲು ಹಾಕಿದರು.
ಪಿಎಂ ಕಿಸಾನ್ ಸಮ್ಮಾನ್ 2 ಸಾವಿರ ರೂ. ಕಡಿತ ಸೇರಿದಂತೆ ನಿರಂತರವಾಗಿ ನೀಡಲಾಗದ ಗ್ಯಾರಂಟಿಗಳು ಹಾಗೂ ಕೈ ಸರ್ಕಾರದ ಇತರ ವಂಚನೆಗಳನ್ನು ಜನರಿಗೆ ಮುಟ್ಟಿಸಬೇಕಿದೆ. ಈ ದಿಸೆಯಲ್ಲಿ ಕಾರ್ಯಕರ್ತರೆಲ್ಲರೂ ಕಂಕಣ ತೊಟ್ಟು ಮುಂಬರುವ ಲೋಕಸಭೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕಿದೆ ಎಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮಾಜಿ ಶಾಸಕರಾದ ರಮೇಶ ಭೂಸನೂರ, ದೇವರಹಿಪ್ಪರಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಮೋದಿ ಸಾರಥ್ಯಕ್ಕೆ ನಾವೆಲ್ಲರೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವಲ್ಲಿ ಪಣ ತೊಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಕಾಸುಗೌಡ ಬಿರಾದಾರ, ಶಿವರುದ್ರ ಬಾಗಲಕೋಟ, ಪ್ರಕಾಶ ಅಕ್ಕಲಕೋಟ, ಈರಣ್ಣ ರಾವೂರ, ವಿವೇಕಾನಂದ ಡಬ್ಬಿ, ರಾಜಕುಮಾರ ಸಗಾಯಿ, ಸಂಜೀವ ಐಹೊಳಿ, ಸಂಜಯ ಪಾಟೀಲ, ಚಿದಾನಂದ ಚಲವಾದಿ, ಗೋಪಾಲ ಘಟಕಾಂಬಳೆ, ದೇವೆಂದ್ರ ವಾಲಿಕಾರ, ಸೈಯದ್ ನಿಡೋಣಿ ಮತ್ತಿತರರಿದ್ದರು. ವಿವಿಧ ಮೋರ್ಚಾಗಳ ನೂರಾರು ಕಾರ್ಯಕರ್ತರು ಸಮಾವೇಶಗೊಂಡಿದ್ದರು.