ಜಿಲ್ಲೆ

ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ

ಬೀದರ್: ಐದು ಉಚಿತ ಯೋಜನೆಗಳನ್ನು ನೀಡುವುದಾಗಿ ಜನರಿಗೆ ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆರೋಪಿಸಿದರು.
ಕಮಠಾಣ ಹೊರವಲಯದಲ್ಲಿ ಆಯೋಜಿಸಿದ್ದ ಬಿಜೆಪಿ ದಕ್ಷಿಣ ಮಂಡಲ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾದ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಜನಹಿತ ಕಾಪಾಡಿದರೂ ಕಾಂಗ್ರೆಸ್ ಸುಳ್ಳು ಆಶ್ವಾಸನೆಯಿಂದ ಗೆದ್ದಿದೆ. ಐದು ಉಚಿತ ಯೋಜನೆಗಳಿಗೆ ಷರತ್ತು ಹಾಕುವ ಮೂಲಕ ಕಾಂಗ್ರೆಸ್ ನಿಜಬಣ್ಣ ಇದೀಗ ಬಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣದಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ ಎರಡು ಬಾರಿ ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನರೊಂದಿಗೆ ನಿಂತು ಬಿಜೆಪಿ ಸರ್ಕಾರದ ಅನೇಕ ಯೋಜನೆಗಳನ್ನು ಪ್ರತಿ ಮನೆಗೆ ಮುಟ್ಟಿಸಿದ ಪರಿಣಾಮ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಲ್ಲಿನ ಮುಖಂಡರು, ಕಾರ್ಯಕರ್ತರ ಜತೆ ಬೆಲ್ದಾಳೆ ಸಂಘಟನೆ ಮೂಲಕ ದಕ್ಷಿಣದಲ್ಲಿ ಪಕ್ಷವನ್ನು ಮಜಬೂತ್ ಮಾಡಿದ್ದಾರೆ ಎಂದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ದಕ್ಷಿಣ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಪರಿಶ್ರಮದಿಂದಲೇ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಎಲ್ಲರೂ ಹಗಲಿರುಳು ಶ್ರಮಿಸಿ ಕೆಲಸ ಮಾಡಿದ್ದರಿಂದ ಚುನಾಯಿತನಾಗಿದ್ದೇನೆ. ಎರಡು ಬಾರಿ ಸೋತಿರುವ ನನಗೆ ಈ ಬಾರಿ ಕ್ಷೇತ್ರದ ಎಲ್ಲ ಸಮಾಜದ ಜನರು ಬೆಂಬಲಿಸಿದಕ್ಕಾಗಿ ಗೆಲುವು ಸಾಧಿಸಿದ್ದೇನೆ ಎಂದರು.
ದಕ್ಷಿಣ ಕ್ಷೇತ್ರದಲ್ಲಿ ಬಿತ್ತನೆ ಬಿಜ ವಿತರಣೆ ಕೇಂದ್ರ ಹೆಚ್ಚಿಸಿ ಎಲ್ಲ ರೈತರಿಗೆ ಸಿಗುವಂತೆ ಕ್ರಮ ವಹಿಸಿರುವೆ. ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಕಲ್ಪಿಸಲು ಸೂಚಿಸಿದ್ದೇನೆ. ಪ್ರತಿ ಗ್ರಾಮದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ಅಭಿಯಾನ ಪ್ರಾರಂಭಿಸಿದ್ದು, ಮುಗಿಯುವ ಹಂತದಲ್ಲಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್ ಮಾತನಾಡಿ, ಡಾ.ಶೈಲೇಂದ್ರ ಬೆಲ್ದಾಳೆ ಕೆಎಸ್ಐಐಡಿಸಿ ಮೂಲಕ ಜಿಲ್ಲಾಸ್ಪತ್ರೆಗೆ ಒಂದು ಕೋಟಿ ರೂ. ವೆಚ್ಚದಲ್ಲಿ ಆಮ್ಲಜನಕ ಘಟಕ ನಿರ್ಮಾಣ ಮತ್ತು ಜಿಲ್ಲೆಯಲ್ಲಿ ಉಚಿತ ಆಂಬುಲೆನ್ಸ್ ಸೇವೆ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹಗಲಿರುಳು ಶ್ರಮಿಸಿದ್ದರಿಂದ ಶಾಸಕರಾಗಿದ್ದಾರೆ. ದಕ್ಷಿಣ ಕ್ಷೇತ್ರ ಮಾದರಿಯಾಗಿ ಅಭಿವೃದ್ಧಿಪಡಿಸಲು ಶ್ರಮಿಸಲಿ ಎಂದರು.
ಮಂಡಲ ಅಧ್ಯಕ್ಷ ರಾಜರಡ್ಡಿ ಶಾಬಾದ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕ್ಷೇತ್ರದ ಉಸ್ತುವಾರಿ ಪೀರಪ್ಪ ಯರನಳ್ಳಿ, ಮುಖಂಡರಾದ ಸುರೇಶ ಮಾಶೆಟ್ಟಿ, ಬಾಬುರಾವ ಮಲ್ಕಾಪುರೆ, ಶಿವರಾಜ ಪಾಟೀಲ್, ಹಣಮಂತಪ್ಪ ಮೈಲಾರೆ, ಕುಶಾಲರಾವ ಯಾಬಾ, ಶಿವಕುಮಾರ ಸ್ವಾಮಿ, ನಾಗಭೂಷಣ ಕಮಠಾಣ, ಚಂದ್ರಶೇಖರ ಪಾಟೀಲ್, ಸಂಜೀವರಡ್ಡಿ ಆಣದೂರ, ಜಗನ್ನಾಥ ಪಾಟೀಲ್, ಹೇಮಾ ತುಕ್ಕಾರಡ್ಡಿ, ಜೋಸೆಫ್ ಕೊಡ್ಡೇಕರ್, ಶಿವಕಾಂತ ಶೇಕಾಪುರ, ವೀರಶೆಟ್ಟಿ ನಿಡವಂಚಾ, ಚಂದ್ರಯ್ಯ ಸ್ವಾಮಿ, ಚನ್ನಪ್ಪ ಗೌರಶೆಟ್ಟಿ ಇತರರಿದ್ದರು.