- ಚಿತ್ರದುರ್ಗ: ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟರಿಗೆ ಸಿಗಬೇಕಾದ ಶಿಕ್ಷಣ, ಉದ್ಯೋಗ ಸೇರಿ ಉನ್ನತ ಸ್ಥಾನ ಪಡೆದು ವಂಚಿಸುವವರಲ್ಲಿ ಪ್ರಭಾವಿಗಳಿದ್ದು, ಇಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.
- ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 33 ಸಾವಿರ ಗ್ರಾಮಗಳ ಪೈಕಿ 11 ಸಾವಿರ ಹಳ್ಳಿಗಳಿಗೆ ಸ್ಮಶಾನದ ಭೂಮಿ ಇಲ್ಲ. ಕೂಡಲೇ ಸ್ಥಳ ಕಾಯ್ದಿರಿಸಬೇಕು. ಎಸ್ಸಿ, ಎಸ್ಟಿ ಸಮುದಾಯದವರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಸಂಬಂಧ ಶಿಕ್ಷೆಯ ಪ್ರಮಾಣ ಶೇ.1ರಿಂದ 3ರಷ್ಟು ಈವರೆಗೂ ಆಗಿಲ್ಲ. ಆದ್ದರಿಂದ ಹೆಚ್ಚಿಸುವ ಮೂಲಕ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
- ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆ ಮೀಸಲು ಅನುದಾನವನ್ನು ಎಸ್ಸಿ-ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಬಳಸಲು ಅಡ್ಡಿಯಾಗಿರುವ 7ಡಿ ಕಲಂ ರದ್ದು ಪಡಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದು, ಇದು ಶೀಘ್ರ ಅನುಷ್ಠಾನಕ್ಕೆ ಬರಬೇಕು. ಇಲ್ಲದಿದ್ದರೆ, ಅಣೆಕಟ್ಟು ನಿರ್ಮಾಣ, ಮೆಟ್ರೋ, ಪಿಡಬ್ಲುೃಡಿ ಒಳಗೊಂಡು ವಿವಿಧ ಇಲಾಖೆಗಳಿಗೆ ವರ್ಗಾವಣೆಗೊಂಡು ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ಹೇಳಿದರು.
- ರಾಜ್ಯಾದ್ಯಂತ 20 ಲಕ್ಷ ಎಕರೆಗೂ ಮೇಲ್ಪಟ್ಟು ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಸಣ್ಣ, ಅತಿಸಣ್ಣ ರೈತರ ತುಂಡು ಭೂಮಿಗೆ ಈಗಾಗಲೇ ಫಾರಂ ನಂ. 50, 53 ಮತ್ತು 57 ಅರ್ಜಿ ಸಲ್ಲಿಸಿದ್ದು, ಕೂಡಲೇ ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಬೇಕು. 8 ಲಕ್ಷ ಮನೆಗಳಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
- ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿದೆ. ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ಸಂವಿಧಾನ ತಿದ್ದುಪಡಿ, ಬಹುಸಂಖ್ಯಾತರ ಮಾಂಸಹಾರ ಸೇವನೆ ಕುರಿತು ಕೀಳರಿಮೆ ಉಂಟು ಮಾಡಿದೆ. ರಾಜ್ಯದಲ್ಲಿ ಮುಸ್ಲಿಮರ ಮೀಸಲು ರದ್ದತಿ, ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಮಹನೀಯರನ್ನು ವಿರೂಪಗೊಳಿಸಿ ಆರ್‌ಎಸ್‌ಎಸ್ ಮುಖಂಡರನ್ನು ವೈಭವೀಕರಿಸಿದ್ದು, ವಿದ್ಯಾರ್ಥಿಗಳಲ್ಲೂ ಕೋಮುಭಾವನೆ ಸೃಷ್ಟಿಸಲು ಪ್ರಯತ್ನಿಸಿದ್ದು, ರೈತ ವಿರೋಧಿ ಕಾಯ್ದೆ ಸೇರಿ ಅನೇಕ ಕಾರಣದಿಂದಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು ಎಂದು ಅಭಿಪ್ರಾಯಪಟ್ಟರು.
ಮುಖಂಡರಾದ ಚಿನ್ನಪ್ಪ ಹೆಗಡೆ, ಅಶೋಕ್ ಚಕ್ರವರ್ತಿ ಇತರರಿದ್ದರು.