ಹಾಸನ: ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿಯ ಸುಳ್ಳು ಪ್ರಮಾಣಪತ್ರ ನೀಡಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದ ಅಪರಾಧಿ ಎಚ್.ಆರ್.ರಾಮಕೃಷ್ಣ ಎಂಬ ವ್ಯಕ್ತಿಗೆ 10 ವರ್ಷಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಹಾಸನದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ಸ್ವಾಮಿ ಅವರು ತೀರ್ಪು ನೀಡಿದ್ದಾರೆ.
ಅಪರಾಧಿ ಎಚ್.ಆರ್.ರಾಮಕೃಷ್ಣ ಮೂಲತಃ ತಿಪಟೂರು ತಾಲೂಕು ಹೊನ್ನವಳ್ಳಿ ಗ್ರಾಮದ ದೇಶಬಾಗ್ ಜಾತಿಗೆ ಸೇರಿದವರಾಗಿದ್ದು ಹಾಲಿ ಅರಸೀಕೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿರುವ ಡಿ.ಎಂ.ಕುರ್ಕೆ ಗ್ರಾಮದಲ್ಲಿ ವಾಸವಾಗಿದ್ದಾರೆ. 1998 ಆ.20ರಂದು ಸರ್ಕಾರಕ್ಕೆ ಮೋಸ ಮಾಡಿ ಮೀಸಲಾತಿ ಸೌಲಭ್ಯವನ್ನು ಪಡೆಯುವ ಉದ್ದೇಶದಿಂದ ಪರಿಶಿಷ್ಟ ಜಾತಿಗೆ ಸೇರದಿದ್ದರೂ ಸಹ ತಾನು ಪರಿಶಿಷ್ಟ ಜಾತಿ ಚೆನ್ನದಾಸ ಜನಾಂಗಕ್ಕೆ ಸೇರಿದಿರುವುದಾಗಿ ಅರಸೀಕೆರೆ ತಹಸೀಲ್ದಾರ್‌ಗೆ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದರು.
1999-2000ದಂದು ಡಿ.ಎಂ.ಕುರ್ಕೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿ ನಂತರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಿ ಆಯ್ಕೆಯಾಗಿ ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ತನ್ನ ಇಬ್ಬರೂ ಮಕ್ಕಳನ್ನು ಇದೇ ಸುಳ್ಳು ದಾಖಲಾತಿ ನೀಡಿ ಶಾಲೆಗೆ ದಾಖಲು ಮಾಡಿ ಮೀಸಲಾತಿ ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಿಂದ ದೃಢಪಟ್ಟಿದೆ. ಆರೋಪಿತನ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯ ವಿರುದ್ಧ ಐಪಿಸಿ ಕಲಂ 196, 198, 199, 420 ಹಾಗೂ 3(1)(9) ಮತ್ತು 7(1)(2) ಎಸ್.ಸಿ./ಎಸ್.ಟಿ ಕಾಯಿದೆ ಅಡಿಯಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸದಾನಂದ ಸ್ವಾಮಿ ಅವರು ಆರೋಪಿತನ ಮೇಲಿದ್ದ ದೋಷಾರೋಪಣೆ ಸಾಬೀತಾಗಿದ ಕಾರಣ ಎಚ್.ಆರ್.ರಾಮಕೃಷ್ಣಗೆ ವಿವಿಧ ಕಾಯಿದೆಗಳ ಅಡಿ ಒಟ್ಟು 10 ವರ್ಷ ಜೈಲು ಶಿಕ್ಷೆ ಹಾಗೂ 45 ಸಾವಿರ ರೂ. ದಂಡ ವಿಧಿಸಿ ಆದೇಶ ಅ.18ರಂದು ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಎಚ್.ಕೆ.ಸುರೇಶ್ ವಾದ ಮಂಡಿಸಿದ್ದರು.