ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಮುಂದಿನ ವರ್ಷ ನಡೆಯುವ ಹಿನ್ನೆಲೆಯಲ್ಲಿ ದೇವಿ ಬಣ್ಣಕ್ಕೆ ಹೋಗುವ ಕಾರ್ಯಕ್ರಮ ದೀಪಾವಳಿ ಪಾಡ್ಯಯಂದು ಶನಿವಾರ ರಾತ್ರಿ ಸಹಸ್ರಾರು ಸಂಖ್ಯೆಯ ಸಂಖ್ಯೆಯ ಜನರ ಮಧ್ಯೆ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.
ಸಹಸ್ರಾರು ಸಂಖ್ಯೆ ಸೇರಿದ್ದ ಭಕ್ತಸಾಗರ ಮಧ್ಯೆ ದೇವಿಯ ಶ್ರೀಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತವರು ಮನೆ ಬಡಿಗೇರ ಅವರ ನಿವಾಸಕ್ಕೆ ಕರೆದುಕೊಂಡು ಹೋಗಲಾಯಿತು. ಪಲ್ಲಕ್ಕಿ ಮೆರವಣಿಗೆ ವೇಳೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ದಾರ ಟ್ರಸ್ಟ್ ಕಮಿಟಿ ಅಧ್ಯಕ್ಷರು, ಸರ್ವ ಸದಸ್ಯರು, ಅರ್ಚಕರು ಹಾಗೂ ಹಕ್ಕುದಾರರ ನೇತೃತ್ವದಲ್ಲಿ ನಡೆದ ದೇವಿ ಬಣ್ಣಕ್ಕೆ ಹೋಗುವ ಕಾರ್ಯಕ್ರಮ ಸಡಗರದಿಂದ ನೆರವೇರಿತು. ಗ್ರಾಮದ ಹಕ್ಕುದಾರರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ದೇವಿಯ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು. ದೇವಸ್ಥಾನ ಆವರಣದಲ್ಲಿ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಿಯನ್ನು ಬಣ್ಣಕ್ಕೆ ಕಳುಹಿಸುವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಹಾಗೂ ಲಕ್ಷ್ಮೀ ಗಲ್ಲಿಯಲ್ಲಿ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗಿತ್ತು. ಭಕ್ತರ ಅನುಕೂಲಕ್ಕೆ ಗ್ರಾಮದ ವಿವಿಧ ಕಡೆಗಳಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು. ತಳಿರು ತೋರಣಗಳಿಂದ ಗ್ರಾಮವನ್ನು ಸಿಂಗರಿಸಲಾಗಿತ್ತು.
ಮಾರ್ಚ್ 2025ರಲ್ಲಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಹೀಗಾಗಿ ದೇವಿಯನ್ನು ಸಂಪ್ರದಾಯದಂತೆ ಬಣ್ಣಕ್ಕೆ ಕಳುಹಿಸುವ ಕಾರ್ಯಕ್ರಮ ನಡೆಯಿತು.