ಜಿಲ್ಲೆ

ಸುಲಭದಲ್ಲಿ ಸಾಲ ಸಿಗುವ ವ್ಯವಸ್ಥೆಯಾಗಲಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸರ್ಕಾರ ಕಾನೂನು ತರುವುದರಿಂದ ಮೈಕ್ರೋ ಫೈನಾನ್ಸ್ಗಳ ಮೇಲೆ ನಿಗಾ ಇಡಲು ಆಗುವುದಿಲ್ಲ. ಬಡ, ಮಧ್ಯಮ ವರ್ಗದವರಿಗೆ ಸುಲಭವಾಗಿ ಸಾಲ ಸಿಗುವ ವ್ಯವಸ್ಥೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ಮೂಲಕ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರದಲ್ಲಿ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿದೆ. ಅದರಿಂದಾಗಿಯೇ ಕಿರುಕುಳ ಮತ್ತಷ್ಟು ಹೆಚ್ಚಿದೆ. ಬಡ, ಮಧ್ಯಮ ವರ್ಗದವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವಂತಾಗಬೇಕು. ಸರ್ಕಾರಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿದರೆ ಮೈಕ್ರೋ ಫೈನಾನ್ಸ್ ಮತ್ತು ಖಾಸಗಿ ಲೇವಾದೇವಿದಾರರ ಅಡ್ರೆಸ್ಸೇ ಇರುವುದಿಲ್ಲ ಎಂದರು.

ಮೈಕ್ರೋ ಫೈನಾನ್ಸ್​ಗಳ ಮೇಲೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಷ್ಟು ಬಡವರಿಗೆ ಸಾಲ ಸಿಗದಂತಾಗುತ್ತದೆ. ಸಾಲ ಸುಲಭವಾಗಿ ಸಿಗುವಂತಹ ಪರ್ಯಾಯ ವ್ಯವಸ್ಥೆ ಆಗಬೇಕು. ಪೊಲೀಸ್ ವ್ಯವಸ್ಥೆ ಮತ್ತು ಖಾಸಗಿ ಲೇವಾದೇವಿದಾರರ ನಡುವೆ ಒಳ ಒಪ್ಪಂದವಿರುತ್ತದೆ. ಇದ್ದಂತಹ ಕಾನೂನಿನಲ್ಲಿ ಮನಿಲೆಂಡರ್ಸ್​ಗಳನ್ನು ಬಂಧಿಸಬಹುದು ಎಂದು ಸಲಹೆ ನೀಡಿದರು.