ಮಲ್ಲಪ್ಪ ಗೌಡ ಔರಾದ್
ಲಂಪಿ ಸ್ಕಿನ್ ರೋಗದಿಂದ ಜಾನುವಾರುಗಳಿಗೆ ಕಂಟಕ ಸೃಷ್ಟಿಯಾಗಿರುವ ಸಂದರ್ಭದಲ್ಲಿ ಇದೀಗ ಕತ್ತೆಗಳಿಗೂ ಸುರ್ರಾ ಎಂಬ ವಿಚಿತ್ರ ಕಾಯಿಲೆ ಬಂದಿದ್ದು, ರೈತ ಸಮೂಹಕ್ಕೆ ಮತ್ತೊಂದು ಆಘಾತ ನೀಡಿದೆ.
ಒಂದು ವಾರದಿಂದ ತಾಲೂಕಿನ ಠಾಣಾಕುಶನೂರು ವಲಯದ ಹಾಲಹಳ್ಳಿ, ನಿಡೋದಾ, ಬಳತ್(ಬಿ) ಸೇರಿ ವಿವಿಧ ಗ್ರಾಮಗಳಲ್ಲಿ ರೈತರ ಬದುಕಿಗೆ ಆಧಾರವಾಗಿರುವ ಕತ್ತೆಗಳು ಸುರ್ರಾ ರೋಗಕ್ಕೆ ಬಲಿಯಾಗುತ್ತಿವೆ. ಜಿಲ್ಲೆಯಲ್ಲಿ ಔರಾದ್ ತಾಲೂಕಿನಲ್ಲಿ ಮಾತ್ರ ಅತಿ ಹೆಚ್ಚು ಕತ್ತೆ ಸಾಕಣೆ ಇದೆ. ಇನ್ನೂ ನೂರಾರು ಕುಟುಂಬಗಳಿಗೆ ಕತ್ತೆಯೇ ಜೀವನಾಧಾರವಾಗಿ ಕೆಲಸ ಮಾಡುತ್ತಿವೆ. ಇಂಥದರಲ್ಲಿ ಕತ್ತೆಗಳು ರೋಗಕ್ಕೆ ಪ್ರಾಣ ಕಳೆದುಕೊಳ್ಳುತ್ತಿರುವುದು ತಲ್ಲಣಕ್ಕೆ ಕಾರಣವಾಗಿದೆ.
ನೀರು ತರಲು, ಹೊಲದಿಂದ ದವಸ ಧಾನ್ಯ ತರಲು, ಗೊಬ್ಬರ ಸಾಗಣೆ, ಮೂಟೆ ತರುವುದು ಸೇರಿ ವಿವಿಧ ಕೆಲಸಕ್ಕೆ ಕತ್ತೆಗಳು ಸಾಕುವ ಕೆಲಸ ಇಲ್ಲಿಯ ರೈತರು ಮಾಡುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಸದ್ಯ ಔರಾದ್ ತಾಲೂಕಿನ ವಿವಿಧೆಡೆ ಮಾತ್ರ ಕತ್ತೆಗಳ ಸಾಕಣೆ ಜೀವಂತ ಇರುವುದು ಕಾಣಬಹುದು. ಮದನೂರು, ಠಾಣಾಕುಶನೂರು, ಸುಂದಾಳ, ಯನಗುಂದಾ, ಮಾನೂರ(ಕೆ), ಲಕ್ಷ್ಮೀನಗರ, ಹಿಪ್ಪಳಗಾಂವ್, ಚಟನಾಳ, ವಡಗಾಂವ, ಜೋಜನಾ, ನಿಡೋದಾ, ಹಾಲಹಳ್ಳಿ, ಬಳತ್ ಇನ್ನಿತರ ಹಲವಾರು ಗ್ರಾಮಗಳಲ್ಲಿ ಇಂದಿಗೂ ಅನೇಕ ರೈತರು ಕತ್ತೆಗಳ ಮೂಲಕ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಈಗ ಕಾಣಿಸಿದ ರೋಗ ಕತ್ತೆಗಳನ್ನೇ ನಂಬಿರುವ ಬಡವರ ಮೇಲೆ ಬರಸಿಡಲು ಬಂದೆರಗಿದಂತೆ ಮಾಡಿದೆ.
ಕತ್ತೆಗಳು ಅನ್ನ, ನೀರು ಬಿಟ್ಟು ಅಶಕ್ತತೆಯಿಂದ ಬಳಲಿ ಸಾವನ್ನಪ್ಪುತ್ತಿವೆ. ಕಳೆದೊಂದು ವಾರದಿಂದ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಕತ್ತೆಗಳು ರೋಗಕ್ಕೆ ಬಲಿಯಾಗಿವೆ. ನೂರಾರು ಕತ್ತೆಗಳು ರೋಗಪೀಡಿತವಾಗಿವೆ. ಹಾಲಹಳ್ಳಿ ಗ್ರಾಮದ ರೈತ ಧೋಡಿರಾಮ ಕೈಕಾಡೆ ಅವರಿಗೆ ಸೇರಿದ ಮೂರು ಲಕ್ಷ ರೂ.ಮೌಲ್ಯದ 8 ಕತ್ತೆಗಳು ಈ ಕಾಯಿಲೆಗೆ ಬಲಿಯಾಗಿವೆ. ಪಶು ಸಂಗೋಪನೆ ಜತೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರ ತವರು ಕ್ಷೇತ್ರದಲ್ಲೇ ಕತ್ತೆಗಳ ಸರಣಿ ಸಾವು ನಡೆಯುತ್ತಿದೆ. ಕೂಡಲೇ ಸಂಬಂಧಿತರು ಎಚ್ಚೆತ್ತುಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಬರಬೇಕು. ಕತ್ತೆಗಳಿಗೆ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇದು ಸುರ್ರಾ ಕಾಯಿಲೆ
ಕಲ್ಯಾಣ ಕರ್ನಾಟಕದಲ್ಲಿ ಮೊದಲ ಸಲ ಸುರ್ರಾ ರೋಗ ಕಾಣಿಸಿಕೊಂಡಿದೆ. ನೋಣಗಳ ರೂಪದ ಟ್ರಪನೋಸೋಮಾ ಜೀವಿಯಿಂದ ಬಂದಿರುವ ಈ ಕಾಯಿಲೆಗೆ ಸುರ್ರಾ ಎಂದು ಗುರುತಿಸಲಾಗಿದೆ. ಈಗಾಗಲೇ ಸತ್ತ ಎಲ್ಲ ಕತ್ತೆಗಳ ರಕ್ತದ ಮಾದರಿ ಪಡೆದು ಪರೀಕ್ಷಿಸಲಾಗಿದ್ದು, ರಕ್ತಹೀನತೆಯಿಂದ ಇವು ಸಾವಿಗೀಡಾದ ಮಾಹಿತಿ ಬಂದಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಬಿರಾದಾರ ತಿಳಿಸಿದ್ದಾರೆ. ಪೀಡಿತ ಕತ್ತೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕತ್ತೆ ಮತ್ತು ಕುದುರೆಗಳಿಗೆ ಅತಿಯಾದ ಜ್ವರ, ಉಸಿರಾಟದ ತೊಂದರೆ, ಕಾಲುಗಳಲ್ಲಿ ಊತ ಕಾಣಿಸಿಕೊಂಡರೆ ಕೂಡಲೇ ರೈತರು ಸಮೀಪದ ಪಶು ವೈದ್ಯರನ್ನು ಸಂಪರ್ಕಿಸಲು ಕೋರಿದ್ದಾರೆ.
ಬಡಪಾಯಿ ಕೂಲಿ ಕಾರ್ಮಿಕನ ಬದುಕಿಗೆ ಆಧಾರವಾಗಿದ್ದ 8 ಕತ್ತೆಗಳು ವಿಚಿತ್ರ ಕಾಯಿಲೆಗೆ ಬಲಿಯಾಗಿದ್ದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಪರಿಹಾರ ಒದಗಿಸಿ ನೆರವಿಗೆ ಬರಬೇಕು.| ಮನೋಜ ಬಿರಾದಾರ, ಹಾಲಹಳ್ಳಿ ರೈತ