ಜಿಲ್ಲೆ

ಸುರೇಬಾನ ಗ್ರಾಮದೇವತೆ ಜಾತ್ರೆ ಜೋರು

ಸುರೇಬಾನ: ಗ್ರಾಮದಲ್ಲಿ ಗ್ರಾಮದೇವತೆ ಸದ್ಭಕ್ತ ಮಂಡಳಿಯಿಂದ ಗ್ರಾಮದೇವತೆಯ ಜಾತ್ರಾ ಮಹೋತ್ಸವವು ಡಿ.19ರಿಂದ ಆರಂಭವಾಗಿದ್ದು 24ರ ವರೆಗೆ ಅನೇಕ ಕಾರ್ಯಕ್ರಮಗಳು ಜರು ಗಲಿವೆ. ವೇದಮೂರ್ತಿ ಶಿರಸಪ್ಪ ಆಚಾರ್ಯ, ಶಿರಸಂಗಿ ಕಾಳಿಕಾದೇವಿ ಅರ್ಚಕ ಕಾಳಾಚಾರ್ಯ ಕೆಂಪಯ್ಯನವರ ನೇತತ್ವದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಜರುಗುತ್ತವೆ.

ಗುರುವಾರದಂದು ಗ್ರಾಮದೇವಿಯನ್ನು ಸುರೇಬಾನ ಗ್ರಾಮದ ಶಬರಿ ದೇವಸ್ಥಾನಕ್ಕೆ ತರಲಾಯಿತು. ಡಿ.20ರಂದು ಬೆಳಗ್ಗೆ 8.22ಕ್ಕೆ ಊರ ಗೌಡರ ಮನೆತನದವರಿಂದ ಮುತ್ತೈದೆಯರ ಉಡಿ ತುಂಬಿದ ನಂತರ ಶಬರಿದೇವಿ ದೇವಸ್ಥಾನದಿಂದ ಗ್ರಾಮದೇವಿಯನ್ನು ಹಲವಾರು ಕಲಾತಂಡಗಳು ಮತ್ತು ಕುಂಭಮೇಳದೊಂದಿಗೆ ರಂಗ ಮಂಟಪಕ್ಕೆ ಕರೆ ತರಲಾಯಿತು.

ಜತೆಗೆ ಜೋಗತಿಯರ ಸೇವೆ ಹಾಗೂ ಪೋತರಾಜನ ಉಗ್ಗಡನೆ, ಡೊಳ್ಳು ಕುಣಿತ, ಕರಡಿ ಮೇಳ ಸಕಲ ವಾದ್ಯವಂದಗಳು ಸಾಥ ನೀಡಿದವು. ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಿತು.

21ರಂದು ಸಂಜೆ 6ಕ್ಕೆ ವೇದಿಕೆ ಕಾರ್ಯಕ್ರಮ ಜರುಗಲಿದೆ. ಕಿಲ್ಲಾ ತೊರಗಲ್ಲ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದಾರೆ. ಯರಗಟ್ಟಿಯ ಸಹಾಯಕ ಪ್ರಾಧ್ಯಾಪಕ ಬಸವರಾಜ ಬೀಳಗಿ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಯ್ಯ ಸಂಗಳಮಠ ಆಗಮಿಸಲಿದ್ದಾರೆ.