ಜಿಲ್ಲೆ

ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಸನ್ನದ್ಧ

ಕಾರವಾರ: ಜೂನ್ 18 ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ವಿದ್ಯಾರ್ಥಿಗಳು ಒಂದು ಮುಕ್ಕಾಲು ಗಂಟೆ ಮುಂಚಿತವಾಗಿ ಬರಬೇಕಿದೆ.

ಹೌದು, ಜಿಲ್ಲೆಯ 30 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆ 15 ನಿಮಿಷದಿಂದ ಪರೀಕ್ಷೆ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳಿಗೆ 8.30 ಕ್ಕೆ ಪರೀಕ್ಷಾ ಕೇಂದ್ರ ತಲುಪಲು ಸೂಚಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಅತ್ಯಂತ ಸುರಕ್ಷಿತವಾಗಿ ಪರೀಕ್ಷೆ ಆಯೋಜಿಸಲು ಇಲಾಖೆ ಸನ್ನದ್ಧವಾಗಿದೆ. ಎಲ್ಲ ವಿದ್ಯಾರ್ಥಿಗಳ ಕೈಗೆ ಸ್ಯಾನಿಟೈಸರ್ ಹಾಕಬೇಕು. ಥರ್ಮಲ್ ಸ್ಕ್ರೀನಿಂಗ್ ಮೂಲಕ ಪರೀಕ್ಷೆ ಮಾಡಬೇಕು ಇದರಿಂದ ಸಮಯಕ್ಕೆ ಸರಿಯಾಗಿ ಪರೀಕ್ಷೆ ಆರಂಭವಾಗಲು ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಮುಂಚಿತವಾಗಿಯೇ ಕರೆಸಲಾಗುತ್ತಿದೆ.

ಜಿಲ್ಲೆಯಲ್ಲಿ 13,568 ವಿದ್ಯಾರ್ಥಿ ಗಳು ಪಿಯು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಹೊರ ಜಿಲ್ಲೆಗಳ 577 ವಿದ್ಯಾರ್ಥಿಗಳಿದ್ದಾರೆ. ಹೊಸ ಹಾಲ್ ಟಿಕೆಟ್ ಅನ್ನು ಆನ್​ಲೈನ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದು. ಇಲ್ಲವೆ, ಹಳೆಯ ಹಾಲ್ ಟಿಕೆಟ್ ಇದ್ದರೂ ಪರೀಕ್ಷೆಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಡಿಡಿಪಿಯು ಎಸ್.ಎನ್.ಬಗಲಿ ಮಾಹಿತಿ ನೀಡಿದ್ದಾರೆ.

ಕ್ವಾರಂಟೈನ್ ಇಲ್ಲ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಮಹಾರಾಷ್ಟ್ರ ಹಾಗೂ ಗೋವಾದಿಂದ 17 ವಿದ್ಯಾರ್ಥಿಗಳು ಆಗಮಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ಕ್ವಾರಂಟೈನ್ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಮಾಹಿತಿ ನೀಡಿದ್ದಾರೆ.

ಎಲ್ಲ ಪರೀಕ್ಷೆ ಕೇಂದ್ರಗಳಲ್ಲಿ ತಲಾ ಇಬ್ಬರು ಆರೋಗ್ಯ ಕಾರ್ಯಕರ್ತೆಯರನ್ನು ನೇಮಿಸಲಾಗುತ್ತಿದೆ. ಅವರು ಪರೀಕ್ಷೆ ನಡೆಸುವರು, ಜ್ವರ, ಥಂಡಿ ಮುಂತಾದ ಆರೋಗ್ಯ ಲಕ್ಷಣಗಳಿದ್ದರೆ ಅಂಥವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗುವುದು. ಇನ್ನು ಕರೊನಾದ ಖಚಿತ ಲಕ್ಷಣಗಳಿದ್ದರೆ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೇ ವಾಪಸ್ ಕಳಿಸಲಾಗುವುದು. ಅವರಿಗೆ ಮರು ಪರೀಕ್ಷೆ ಮಾಡಲು ಮಂಡಳಿ ಅವಕಾಶ ನೀಡಿದೆ ಎಂದು ಡಿಡಿಪಿಯು ಎಸ್.ಎನ್.ಬಗಲಿ ಮಾಹಿತಿ ನೀಡಿದ್ದಾರೆ.

105 ಬಸ್ ವ್ಯವಸ್ಥೆ
ಆಯಾ ಕಾಲೇಜ್​ನ ಪ್ರಾಂಶುಪಾಲರು ಬಹುತೇಕ ಎಲ್ಲ ವಿದ್ಯಾರ್ಥಿಗಳಿಗೆ ಕರೆ ಮಾಡಿ ಮಾತನಾಡಿದ್ದಾರೆ. ಹೇಗೆ ಬರುತ್ತೀರಿ..? ಬರಲು ವಾಹನ ವ್ಯವಸ್ಥೆ ಇದೆಯೇ ಎಂಬ ಬಗ್ಗೆ ವಿಚಾರ ಮಾಡಿದ್ದಾರೆ. ಶೇ. 50 ರಷ್ಟು ವಿದ್ಯಾರ್ಥಿಗಳು ಖಾಸಗಿ ವಾಹನದಲ್ಲಿ ಬರುವುದಾಗಿ ತಿಳಿಸಿದ್ದಾರೆ. ಇನ್ನು ಖಾಸಗಿ ವಾಹನ ಇಲ್ಲದ ವಿದ್ಯಾರ್ಥಿಗಳಿಗೆ ಎನ್​ಡಬ್ಲ್ಯುಕೆಆರ್​ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಯಾವ ಊರುಗಳಿಂದ ಎಷ್ಟು ವಿದ್ಯಾರ್ಥಿಗಳು ಬರುತ್ತಾರೆ ಎಂಬ ಪಟ್ಟಿ ಮಾಡಿ ಎನ್​ಡಬ್ಲ್ಯುಕೆಆರ್​ಟಿಸಿಗೆ ನೀಡಲಾಗಿದೆ. ಅದರ ಆಧಾರದ ಮೇಲೆ 105 ವಿಶೇಷ ಬಸ್​ಗಳನ್ನು ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಬೆಳಗ್ಗೆ ಬಿಡಲಾಗುತ್ತಿದೆ. ಪರೀಕ್ಷೆ ಮುಗಿದ ನಂತರ ಆಯಾ ಹಳ್ಳಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.ಈ ಬಸ್​ಗಳಲ್ಲಿ ಉಚಿತ ಪ್ರಯಾಣವಾಗಿದೆ. ಅಲ್ಲದೆ, ಪಿಯುಸಿ ಹಾಲ್ ಟಿಕೆಟ್ ತೋರಿಸಿದರೆ ರಾಜ್ಯ ಸಾರಿಗೆ ಸಂಸ್ಥೆಯ ಯಾವುದೇ ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸಲು ಸಂಸ್ಥೆ ವ್ಯವಸ್ಥೆ ಮಾಡಿಕೊಟ್ಟಿದೆ ಎಂದು ಎನ್​ಡಬ್ಲ್ಯುಕೆಆರ್​ಟಿಸಿ ಶಿರಸಿ ಡಿಸಿ ವಿವೇಕಾನಂದ ಹೆಗಡೆ ತಿಳಿಸಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಕೊಠಡಿಗಳ ಸ್ಯಾನಿಟೈಸ್ ಮಾಡಲಾಗಿದೆ. ಅಗತ್ಯವಿದ್ದಷ್ಟು ಸ್ಯಾನಿಟೈಸರ್, ಮಾಸ್ಕ್ ಅನ್ನು ದಾನಿಗಳಿಂದ ಸಂಗ್ರಹಿಸಲಾಗಿದೆ. ಹೆಚ್ಚುವರಿ ಕಾರ್ಯ ಇರುವುದರಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಕರ ಹೊರತಾಗಿ ಹೆಚ್ಚುವರಿ ಉಪನ್ಯಾಸಕರನ್ನು ನೇಮಿಸಲಾಗಿದೆ.| ಎಸ್.ಎನ್.ಬಗಲಿ ಡಿಡಿಪಿಐ, ಕಾರವಾರ