ಚಿತ್ರದುರ್ಗ: ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಪಾಲ್ಗೊಂಡ ಗರ್ಭಿಣಿಯರು ಕಬ್ಬಿಣಾಂಶದ ಕೊರತೆ ನೀಗಿಸಿಕೊಂಡು ಸುರಕ್ಷಿತ ತಾಯ್ತತನ ಪಡೆಯಿರಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಸಲಹೆ ನೀಡಿದರು.
ತಾಲೂಕಿನ ಗೊಡಬನಹಾಳ್ ಪಿಎಚ್‌ಸಿಯಲ್ಲಿ ಇ-ಪಿಎಂಎಸ್‌ಎ ಕಾರ್ಯಕ್ರಮದಡಿ ಎಲ್ಲ ವರ್ಗದ ತೊಡಕಿನ ಗರ್ಭಿಣಿಯರಿಗೆ ವಿಶೇಷ ಸುರಕ್ಷಿತ ಮಾತೃತ್ವ ಅಭಿಯಾನದಡಿ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಪ್ರತಿ ಮನೆಯ ಮಾತಾಗಬೇಕು. ಕ್ಷೇತ್ರ ಮಟ್ಟದಲ್ಲಿ ಗರ್ಭಿಣಿ ಆರೈಕೆಯಲ್ಲಿ ಕಬ್ಬಿಣಾಂಶದ ಕೊರತೆಯಿಂದ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿ, ರಕ್ತಹೀನತೆ ಉಂಟಾಗುತ್ತದೆ. ಅದಕ್ಕಾಗಿ ಎಚ್‌ಬಿ 7 ಗ್ರಾಂಗಿಂತ ಕಡಿಮೆ ಇರುವ ಗರ್ಭಿಣಿಯರಿಗೆ ರಕ್ತವನ್ನು ನೀಡಲಾಗುವುದು ಎಂದು ತಿಳಿಸಿದರು.
7 ಗ್ರಾಂ ಮೇಲ್ಪಟ್ಟು 10 ಗ್ರಾಂ ಹಿಮೋಗ್ಲೋಬಿನ್ ಪ್ರಮಾಣವಿರುವ ಗರ್ಭಿಣಿಯರಿಗೆ ಕನಿಷ್ಠ 10 ಡೋಸ್ ಐರನ್ ಸುಕ್ರೋಸ್ ಇಂಜೆಕ್ಷನ್ ಮೂಲಕ ಕಬ್ಬಿಣದ ಕೊರತೆ ನೀಗಿಸಿ ಎಚ್‌ಬಿ ಪ್ರಮಾಣ ಹೆಚ್ಚಿಸಲಾಗುವುದು. ಮಾತ್ರೆಗಳ ಮೂಲಕ ಕನಿಷ್ಠ 12 ಗ್ರಾಂ ಎಚ್‌ಬಿ ಇರುವಂತೆ ನಿರ್ವಹಿಸಲಾಗುವುದು ಎಂದು ಹೇಳಿದರು.
ಕೇಂದ್ರದ ವೈದ್ಯಾಧಿಕಾರಿ ಡಾ.ಜಿ. ಅನುಷಾ ಮಾತನಾಡಿ, ಗರ್ಭಿಣಿಯರು ಮುಟ್ಟುನಿಂತ ಕೂಡಲೇ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ಒದಗಿಸಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಿಂದ ಗರ್ಭಧಾರಣೆ ಪರೀಕ್ಷೆಯೊಂದಿಗೆ ಖಚಿತತೆ, ತಾಯಿ ಕಾರ್ಡ್ ಮೂಲಕ ಸರ್ಕಾರಿ ಸೌಲಭ್ಯ ಪಡೆದು ತಾಯಿ-ಶಿಶು ಮರಣ ಪ್ರಮಾಣ ನಿಯಂತ್ರಿಸಲು ಸಹಕರಿಸಿ ಎಂದು ಸಲಹೆ ನೀಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಮಾತನಾಡಿ, ಗರ್ಭಿಣಿ, ಬಾಣಂತಿ, ಮಕ್ಕಳ ಆರೈಕೆಯಲ್ಲಿ ಸೇವಿಸಬೇಕಾದ ಪೌಷ್ಟಿಕ ಆಹಾರದ ಮತ್ತು ಮಕ್ಕಳ ಲಸಿಕಾ ವೇಳಾ ಪಟ್ಟಿ ಹಾಗೂ ಎದೆ ಹಾಲಿನ ಮಹತ್ವದ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ 16 ಗರ್ಭಿಣಿಯರ ತಪಾಸಣೆ ಬಳಿಕ ಚಿಕಿತ್ಸೆ ನೀಡಲಾಯಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಧು, ಪ್ರವೀಣ್, ತಾಲೂಕು ಆಶಾ ಭೋಧಕಿ ತಬಿತಾ ಇತರರಿದ್ದರು.