ಹನೂರು: ಪ್ರತಿಯೊಬ್ಬರೂ ಸುರಕ್ಷತಾ ಪರಿಕರಗಳನ್ನು ಧರಿಸಿಕೊಂಡು ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವುದರ ಜತೆಗೆ ಮಲೆಮಹದೇಶ್ವರ ಬೆಟ್ಟದ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಚಂದ್ರಕಲಾ ತಿಳಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೌರ ಕಾರ್ಮಿಕರ ಕುಂದುಕೊರತೆ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.
ಮ.ಬೆಟ್ಟ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ. ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಹಾಗಾಗಿ ಸ್ವಚ್ಛತೆಯನ್ನು ಕಾಪಾಡುವುದು ಅತಿ ಮುಖ್ಯ. ಇದರಲ್ಲಿ ಪೌರಕಾರ್ಮಿಕರ ಶ್ರಮ ಅಪಾರ. ಪ್ರಾಧಿಕಾರದ ವತಿಯಿಂದ ಸುರಕ್ಷತಾ ಪರಿಕರ ಹಾಗೂ ಇನ್ನಿತರ ಸೌಕರ್ಯವನ್ನು ಒದಗಿಸುತ್ತಿದೆ. ಆದರೆ ಕೆಲವರು ಸುರಕ್ಷತಾ ಪರಿಕರಗಳನ್ನು ಧರಿಸದಿರುವುದು ವಿಪರ್ಯಾಸ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಗ್ಲೌಸ್, ಶೂ ಹಾಗೂ ಹೆಲ್ಮೆಟ್ ಧರಿಸಬೇಕು. ಸ್ವಚ್ಛತೆಯ ಜತೆಗೆ ಆರೋಗ್ಯದ ಕಡೆ ಗಮನಹರಿಸಬೇಕು. ಈಗಾಗಲೇ ತಿಳಿದಂತೆ ಪ್ರಾಧಿಕಾರದ ಕಾರ್ಯದರ್ಶಿ ಅವರು ಪೌರ ಕಾರ್ಮಿಕರ ಕಲ್ಯಾಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಅದರಂತೆಯೇ ಪ್ರತಿಯೊಬ್ಬರೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಸಮಸ್ಯೆಗಳೇನಾದರೂ ಇದ್ದಲ್ಲಿ ಕಾರ್ಯದರ್ಶಿ ಅವರ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದರು.
ಸೌಕರ್ಯ ಕಲ್ಪಿಸಲು ಬದ್ಧ: ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಪೌರ ಕಾರ್ಮಿಕರು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ಸ್ವಚ್ಛತಾ ಕಾರ್ಯಕ್ಕಾಗಿ ಗುಣಮಟ್ಟದ ಸುರಕ್ಷತಾ ಪರಿಕರಗಳನ್ನು ನೀಡಲಾಗುತ್ತಿದೆ. ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಬಾಡಿಗೆ ರೂಪದಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈಗಾಗಲೇ ನಡೆದ ಪ್ರಾಧಿಕಾರದ ಸಭೆಯಲ್ಲಿ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡುವ ಸಂಬಂಧ ಅನುಮೋದನೆ ಪಡೆಯಲಾಗಿದೆ. ಮನೆ ನಿರ್ಮಿಸಿದ ಬಳಿಕ ಬಾಡಿಗೆ ರೂಪದಲ್ಲಿ ಇಲ್ಲವೇ ರಿಯಾಯಿತಿ ದರದಲ್ಲಿ ನೀಡಬೇಕೋ ಎಂಬುದರ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಕಾಯಂ ಮಾಡುವ ಸಂಬಂಧ ಈಗಾಗಲೇ ಚರ್ಚಿಸಲಾಗಿದ್ದು, ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಹಾಗಾಗಿ ಪೌರ ಕಾರ್ಮಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಪ್ರಾಧಿಕಾರ ಸದಾ ಬದ್ಧವಾಗಿರುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಪೌರ ಕಾರ್ಮಿಕರು ಮನೆ ನಿರ್ಮಿಸಿಕೊಡುವಂತೆ ಹಾಗೂ ಇನ್ನಿತರ ಕೆಲ ಸವಲತ್ತುಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಕಾರ್ಯದರ್ಶಿ ಅವರು ಅಗತ್ಯ ಭರವಸೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜು, ಪ್ರಾಧಿಕಾರದ ಉಪ ಕಾರ್ಯದರ್ಶಿ ಜಿ.ಎಲ್. ಚಂದ್ರಶೇಖರ್, ಪ್ರಾಧಿಕಾರದ ನೌಕರರು ಹಾಗೂ ಪೌರ ಕಾರ್ಮಿಕರು ಇದ್ದರು.