ಜಿಲ್ಲೆ

ಸುಮಧುರ ಸಂಗೀತದಿಂದ ಬದುಕಿಗೆ ಆಹ್ಲಾದ

ಚಾಮರಾಜನಗರ: ಪ್ರಸ್ತುತ ಪ್ರತಿಯೊಬ್ಬರೂ ಒತ್ತಡದ ಬದುಕನ್ನು ಸಾಗಿಸುತ್ತಿದ್ದು, ಈ ನಡುವೆ ಸುಮಧುರ ಸಂಗೀತವನ್ನು ಕೇಳಿಸಿಕೊಳ್ಳುವುದು ಬದುಕಿಗೆ ಆಹ್ಲಾದವನ್ನು ಉಂಟುಮಾಡುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಜನ್ಮದಿನಾಚರಣೆ ಹಾಗೂ ವೇದಿಕೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತಮಾಡಿದರು.

ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಎಸ್‌ಪಿಬಿ ಅವರ ಜನ್ಮದಿನಾಚರಣೆಗೆ ಮಾತ್ರ ಸಮೀಮಿತವಾಗದೇ, ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆಸಕ್ತ ಕಲಾವಿದರು ಇಂತಹ ಕಾರ್ಯಕ್ರಮಗಳನ್ನು ಮಾಡುವುದು ಅತ್ಯಂತ ಅನುಕರಣೀಯವಾಗಿದೆ ಎಂದು ತಿಳಿಸಿದರು.

ಹಿರಿಯ ಹೋರಾಟಗಾರ ಮತ್ತು ಸಾಹಿತಿ ಮುಳ್ಳೂರು ಶಿವಮಲ್ಲು ಮಾತನಾಡಿ, ಎಸ್‌ಪಿಬಿ ಸುಮಧುರ ಹಾಡುಗಳ ನಮ್ಮೆದುರಿನ ಗಾನಪರ್ವತವೇ ಆಗಿದ್ದಾರೆ. ಬಹಳ ಸೌಜನ್ಯಯುತ ಜೀವನವನ್ನು ನಡೆಸಿ, ಭಾಷಾ ವೈಶಾಲ್ಯತೆಯನ್ನು ಸಾರಿದ್ದಾರೆ. ಅವರ ಹೆಸರಿನಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿರುವುದು ಆದರ್ಶಪ್ರಾಯವಾಗಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ನಗರಸಭಾ ಸದಸ್ಯೆ ಚಿನ್ನಮ್ಮ, ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಸಮರ ಸಿಂಹ ಕೃಷ್ಣನಾಯಕ್, ಕಾರ್ಯಕರ್ತ ಎಂ.ಶಿವಶಂಕರ್, ಬಿಎಸ್‌ವಿ ಪ್ರತಿಷ್ಠಾನದ ವೆಂಕಟನಾಗಪ್ಪಶೆಟ್ಟಿ, ಗಾಯಕ ಸಿ.ಎಂ.ನರಸಿಂಹಮೂರ್ತಿ, ವೇದಿಕೆಯ ಅಧ್ಯಕ್ಷ ಎಚ್.ಎಂ.ಶಿವಣ್ಣ ಹೊಸೂರು, ಜಂಟಿ ಕಾರ್ಯದರ್ಶಿ ಜೋಸ್ೆ, ಉಪಾಧ್ಯಕ್ಷೆ ವಸಂತಮ್ಮ, ಖಜಾಂಚಿ ಸಿ.ಡಿ.ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಬಂಗಾರು, ಹಿರಿಯ ಗಾಯಕ ಡಾ.ಸುಗಂಧರಾಜ್, ಕಲೆ ನಟರಾಜ್ ಹಾಗೂ ಇತರರು ಹಾಜರಿದ್ದರು.