ಸಕಲೇಶಪುರ: ಪಟ್ಟಣದ ಸುಭಾಷ್ ಮೈದಾನವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲು ಸಮಗ್ರ ಯೋಜನೆ ರೂಪಿಸಿ ಎಂದು ಶಾಸಕ ಸಿಮೆಂಟ್ ಮಂಜು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಸುಭಾಷ್ ಮೈದಾನಕ್ಕೆ ಭೇಟಿ ನೀಡಿ ಕ್ರೆಡಾಂಗಣವನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಮೈದಾನವನ್ನು ಎಷ್ಟು ಸ್ವಚ್ಛಗೊಳಿಸಿದರೂ ಮತ್ತೆ ಹುಲ್ಲು ಬೆಳೆಯುತ್ತಿದೆ. ತಾಲೂಕಿನಲ್ಲಿ ಆರು ತಿಂಗಳು ಮಳೆ, ಆರು ತಿಂಗಳು ಬಿಸಿಲು ಕಂಡು ಬರುವುದರಿಂದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಅನುಕೂಲ. ಒಳಾಂಗಣ ಕ್ರೆಡಾಂಗಣದಲ್ಲಿ ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳ, ಜಿಮ್, ಬಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಾಣ ಮಾಡಲಾಗುವುದು. ಹೊರಾಂಗಣದಲ್ಲಿ 400 ಮೀ. ಹಾಗೂ 200 ಮೀ. ರನ್ನಿಂಗ್ ಟ್ರ್ಯಾಕ್ ಮತ್ತು ಕಬಡ್ಡಿ ಕೋರ್ಟ್ ಮಾಡಲು ಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳನ್ನು ಕರೆದು ಅಂದಾಜು ತಯಾರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಅನುದಾನ ನೀಡುವಂತೆ ಮನವಿ ಮಾಡುತ್ತಿದ್ದೇನೆ ಎಂದರು.
ಸರ್ಕಾರ ಅನುದಾನ ನೀಡಿದರೆ ಶೀಘ್ರ ಒಳಾಂಗಣ ಕ್ರೆಡಾಂಗಣ ನಿರ್ಮಿಸಿ, ಯುವಕರಿಗೆ ಮಳೆಗಾಲದಲ್ಲಿಯೂ ದೈಹಿಕ ಅಭ್ಯಾಸ ಮಾಡಲು ಅನುಕೂಲ ಕಲ್ಪಿಸಬಹುದು. ಮೈದಾನದಲ್ಲಿ ಅಕ್ರಮವಾಗಿ ಕೆಲವರು ಕಸ ಹಾಕುತ್ತಿರುವುದರಿಂದ ಆಟ ಆಡಲು ಸಮಸ್ಯೆಯಾಗುತ್ತಿದೆ. ಶೌಚಗೃಹ ಹಾಗೂ ವಿದ್ಯುತ್ ಸಂಪರ್ಕವನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶೀಘ್ರ ಮೈದಾನದಲ್ಲಿರುವ ಕಳೆಯನ್ನು ತೆಗೆಯಲು ವ್ಯವಸ್ಥೆ ಮಾಡಲಾಗುವುದು. ಸ್ಥಳೀಯರು ಹಾಗೂ ಯುವಕರು ಸ್ವಚ್ಛತೆಗೆ ಆದ್ಯತೆ ನೀಡಿ, ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿದರೆ ಮೈದಾನವನ್ನು ಸುಸ್ಥಿತಿಯಲ್ಲಿ ಉಳಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ನಿರ್ಮಿತಿ ಕೇಂದ್ರದ ಇಂಜಿನಿಯರ್ ಪ್ರಸನ್ನ, ಪತ್ರಕರ್ತರಾದ ಸುಧೀರ್, ಅಕ್ಬರ್, ಪ್ರದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.