ಜಿಲ್ಲೆ

ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ : ಘಾಟಿ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಭಾಗಿ

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಕರೊನಾ ಕಾರಣದಿಂದ ಕಳೆದೆರಡು ವರ್ಷ ಸಾಂಕೇತಿಕವಾಗಿ ನೆರವೇರಿದ್ದ ಘಾಟಿ ಸುಬ್ರಹ್ಮಣ್ಯ ರಥೋತ್ಸವ ಬುಧವಾರ ಅದ್ದೂರಿಯಾಗಿ ನೆರವೇರಿತು.
ಬೆಳಗ್ಗೆ 11.55ರ ಪುಷ್ಯ ಶುದ್ಧ ಷಷ್ಠಿಯಂದು ಶುಭ ಮೀನ ಲಗ್ನದಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ಅದ್ದೂರಿತನ ಕಂಡುಬಂತು.
ಸಾವಿರಾರು ಭಕ್ತರು ಲಕ್ಷ್ಮೀನರಸಿಂಹ, ಸುಬ್ರಹ್ಮಣ್ಯ ಸ್ವಾಮಿ ನಾಮಸ್ಮರಣೆ ಮಾಡುತ್ತಾ ರಥ ಎಳೆಯುವ ಸಾಂಪ್ರದಾಯಿಕ ಕಾರ್ಯದಲ್ಲಿ ಭಾಗಿಯಾದರು. ರಥಕ್ಕೆ ಬಾಳೆಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಮುಂಜಾನೆಯಿಂದಲೇ ದೇವರ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ವಿವಿಧ ಬಗೆಯ ಅಭಿಷೇಕ, ಹೋಮಗಳು ನೆರವೇರಿದವು. ಅಲಂಕೃತ ರಥದೊಳಗೆ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಜಿಲ್ಲೆಯಲ್ಲದೆ ನೆರೆಯ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಆಂಧ್ರ ಹಾಗೂ ತಮಿಳುನಾಡಿನ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
ಸಾಂಸ್ಕೃತಿಕ ನಾಟಕ ಪ್ರದರ್ಶನ: ಇಂಚರ ಸಾಂಸ್ಕೃತಿಕ ಕಲಾತಂಡದಿಂದ ಘಾಟಿ ಕಲಾರಂಗ ಮಂದಿರದಲ್ಲಿ ಜಾನಪದ ಗೀತೆಗಳು, ಸಾಂಸ್ಕೃತಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಕಳೆದೆರಡು ವರ್ಷದಿಂದ ಕೋವಿಡ್ ಕಾರಣಕ್ಕೆ ವ್ಯಾಪಾರ ವಹಿವಾಟು ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸಿದ್ದ ವ್ಯಾಪಾರಿಗಳ ಮೊಗದಲ್ಲಿ ಸಂತಸ ಕಂಡುಬಂತು.

ಸರ ಕಳವು : ಬೆಂಗಳೂರಿನಿಂದ ಆಗಮಿಸಿದ್ದ ಭಕ್ತೆಯೊಬ್ಬರ ಮಾಂಗಲ್ಯ ಸರ ಕಳುವಾಗಿದೆ. ಮಾಗಡಿ ರಸ್ತೆಯ ಮಾಚೋಹಳ್ಳಿ ನಿವಾಸಿ ಗೌರಮ್ಮ(55) ಸರ ಕಳೆದುಕೊಂಡವರು. ಬೆಳಗ್ಗೆ ಕುಟುಂಬ ಸಮೇತ ಘಾಟಿಗೆ ಆಗಮಿಸಿ ದೇವರ ದರ್ಶನ ಪಡೆದು, ದೊಡ್ಡಬಳ್ಳಾಪುರದ ಮಗಳ ಮನೆಗೆ ವಾಪಸ್ ಆಗಲು ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಬಸ್ ಹತ್ತಿದ್ದಾರೆ. ಬಸ್ ಒಳಗೆ ತೆರಳಿದ ಬಳಿಕ ಸರ ಕಳುವಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆ ಪಿಐ ಮುನಿಕೃಷ್ಣ, ಮಹಿಳೆಯಿಂದ ಮಾಹಿತಿ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೇರು ಎಳೆದ ಜಿಲ್ಲಾಧಿಕಾರಿ: ಜಿಲ್ಲಾಧಿಕಾರಿ ಆರ್.ಲತಾ, ತಹಸೀಲ್ದಾರ್ ಮೋಹನಕುಮಾರಿ, ಮುಜರಾಯಿ ಇಲಾಖೆ ಆಯುಕ್ತೆ ಜೆ.ಜೆ.ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್ ಸೇರಿ ಸ್ಥಳೀಯ ಮುಖಂಡರು ರಂಗಮಂದಿರದವರೆಗೆ ತೇರು ಎಳೆದು ಪ್ರಾರ್ಥನೆ ಸಲ್ಲಿಸಿದರು. ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜು ಭಕ್ತರಿಗೆ ಮಾಸ್ಕ್ ವಿತರಿಸಿದರು.

ನಾಗರಕಲ್ಲುಗಳಿಗೆ ಪೂಜೆ: ನಾಗರಕಲ್ಲುಗಳಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾಡಳಿತ ದೊಡ್ಡಬಳ್ಳಾಪುರದಿಂದ ಉಚಿತ ಬಸ್ ವ್ಯವಸ್ಥೆ ಮಾಡಿತ್ತು. ವಾಹನಗಳಿಗೆ ದೇಗುಲದಿಂದ 3 ಕಿಮೀ ದೂರದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು.