ಹಾಸನ: ಹಾಸನ ಜಿಲ್ಲಾ ಬ್ರಾಹ್ಮಣ ಸಭಾದಿಂದ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದ್ದ ಆಂಧ್ರಪ್ರದೇಶದ ಅಧೋನಿ ಶಂಕರ ಮಠದ ಸ್ವಾಮೀಜಿ ಶ್ರೀ ಸುಬ್ರಹ್ಮಣ್ಯ ಭಾರತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತ ಸಂಪನ್ನದ ಅಂಗವಾಗಿ ಭಾನುವಾರ ಸಂಜೆ ಸಹಸ್ತ್ರಾರು ಭಕ್ತ ಗಣದ ಸಮ್ಮುಖದಲ್ಲಿ ನಡೆದ ಶೋಭಾ ಯಾತ್ರೆ ಅದ್ದೂರಿಯಾಗಿ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿತು.
ದಿವ್ಯ ಚೈತನ್ಯ ಆವರಣದಿಂದ ಹೊರಟ ಶೋಭಾ ಯಾತ್ರೆಯು ಸ್ಟೇಟಸ್ ಹಾಲ್ ವೃತ್ತ, ಅರಳಿಕಟ್ಟೆ ಸರ್ಕಲ್, ಸೀತಾರಾಮ ಆಂಜನೇಯ ದೇವಸ್ಥಾನದ ಬೀದಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿತು. ಈ ವೇಳೆ ಭಕ್ತರು ತಮ್ಮ ಮನೆಯ ಮುಂಭಾಗ ತಳಿರು-ತೋರಣ, ರಂಗೋಲಿಗಳಿಂದ ಸಿಂಗರಿಸಿ ಶ್ರೀಗಳಿಗೆ ಭವ್ಯ ಸ್ವಾಗತ ನೀಡಿ ಫಲಸಮರ್ಪಣೆ ಮಾಡಿದರು.
ಮೆರವಣಿಗೆಯಲ್ಲಿ ವೇದ ಪಂಡಿತರಿಂದ ವೇದಘೋಷ, ಆಕರ್ಷಕ ಚಂಡೆ ವಾದನ, ನಂದಿ ಧ್ವಜ ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಹಾಗೂ ನಗರದ ವಿವಿಧ ಭಜನಾ ತಂಡಗಳು ಭಾಗವಹಿಸಿ ನಗರದ ಬೀದಿಗಳಲ್ಲಿ ಆಧ್ಯಾತ್ಮದ ಕಂಪನ್ನು ಬೀರಿದವು. ಶೋಭಾ ಯಾತ್ರೆಯಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ಸದಸ್ಯರು ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎಸ್. ಮಂಜುನಾಥ ಮೂರ್ತಿ, ಅನೇಕ ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಹಾಸನದಲ್ಲಿ ಸುಬ್ರಹ್ಮಣ್ಯ ಭಾರತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ಕಾರ್ಯಕ್ರಮನ ಯಶಸ್ವಿಯಾಗಿ ನೆರವೇರಿದೆ. ಇದರ ಅಂಗವಾಗಿ ಅನೇಕ ಆಧ್ಯಾತ್ಮಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಾಸನದ ಜನತೆಗೆ ಆಧ್ಯಾತ್ಮದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ. ಇದೇ ಮಂಗಳವಾರ ಚಾತುರ್ಮಾಸ್ಯ ವ್ರತ ಸಂಪನ್ನವಾಗಲಿದ್ದು, ಇನ್ನು ಸಹ ಶ್ರೀಗಳ ದರ್ಶನ ಮಾಡದೆ ಇದ್ದವರು ದಿವ್ಯ ಚೇತನ್ಯಕ್ಕೆ ಆಗಮಿಸಿ ಶ್ರೀಗಳ ದರ್ಶನ ಮಾಡಬಹುದು ಎಂದು ತಿಳಿಸಿದರು.