ಜಿಲ್ಲೆ

ಸುಪ್ರೀಂಕೋರ್ಟ್ ತೀರ್ಪಿನಂತೆ ಗ್ರಾಚ್ಯುಟಿ ನೀಡಿ: ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

Shivamogga

ಸಾಗರ: ಗ್ರಾಚ್ಯುಟಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಒಕ್ಕೂಟ (ಎಐಟಿಯುಸಿ)ದ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.

ಫೆಡರೇಷನ್ ರಾಜ್ಯ ಸಂಚಾಲಕ ರವೀಂದ್ರ ಸಾಗರ್ ಮಾತನಾಡಿ, ಕೆಲಸದ ಭದ್ರತೆಯಿಲ್ಲದೆ ದುಡಿಯುತ್ತಿರುವ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರ ಬದುಕು ಅತ್ಯಂತ ಸಂಕಷ್ಟದಲ್ಲಿದೆ. ಬೇಡಿಕೆ ಈಡೇರಿಕೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಆಳುವ ಸರ್ಕಾರ ಗಮನ ಹರಿಸದೆ ಇರುವುದು ಬೇಸರದ ಸಂಗತಿ ಎಂದರು.

ಗ್ರಾಚ್ಯುಟಿ ಸೌಲಭ್ಯಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅರ್ಹರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ ಇಲ್ಲಿಯವರೆಗೆ ರಾಜ್ಯ ಸರ್ಕಾರ ತೀರ್ಪಿನಂತೆ ಯೋಜನೆ ಜಾರಿಗೊಳಿಸಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡದ ಅಂಗನವಾಡಿ ನೌಕರರಿಗೆ ವೈದ್ಯಕೀಯ ಪರಿಹಾರ ನೀಡಬೇಕು. ಮಿನಿ ಅಂಗನವಾಡಿಗಳಿಗೆ ಸಹಾಯಕಿಯರನ್ನು ನೇಮಕ ಮಾಡಬೇಕು. ತೀವ್ರತರ ಅನಾರೋಗ್ಯ ಪೀಡಿತರಿಗೆ ಪರಿಹಾರ ನೀಡಬೇಕು. ಗುಣಮಟ್ಟದ ಮೊಬೈಲ್ ಕೊಡಿಸುವ ಜತೆೆಗೆ ಮೊಬೈಲ್ ರಿಪೇರಿ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಪ್ರಭಾರ ಭತ್ಯೆಯನ್ನು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.