ಜಿಲ್ಲೆ

ಸುಪ್ತ ಪ್ರತಿಭೆ ಹೊರತರಲು ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆ

ಕೆ.ಆರ್.ಪೇಟೆ: ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದೆ ಎಂದು ಸಮಾಜ ಸೇವಕ ಆರ್.ಟಿ.ಒ. ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಹೇಮಗಿರಿಯ ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡರ ಮಾರ್ಗದರ್ಶನದಲ್ಲಿ ಹೇಮಗಿರಿ ಬಿಜಿಎಸ್ ಎಜುಕೇಷನ್ ಸೆಂಟರ್ ಶಾಲಾ ಆವರಣದಲ್ಲಿ ಮಕ್ಕಳಿಂದ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಜ್ಞಾನ ವೃದ್ಧಿಗೆ ಪ್ರದರ್ಶನಗಳು ಪೂರಕವಾಗಿವೆ. ಅವರಲ್ಲಿ ತಂತ್ರಜ್ಞಾನ, ಪರಿಸರ ಕಾಳಜಿ ಹಾಗೂ ಚರಿತ್ರೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಬಿಜಿಎಸ್ ಶಾಲೆ ಎಂದರೆ ವಿಶೇಷ, ವಿನೂತನ ಕಾರ್ಯಕ್ರಮಗಳನ್ನು ರೂಪಿಸುವ ಕಣಜ. ಮಕ್ಕಳು ಪ್ರಶ್ನಿಸದೆ ಯಾವುದೇ ಸಂಗತಿಯನ್ನು ಒಪ್ಪಬಾರದು. ತಾಂತ್ರಿಕವಾಗಿ ಬೆಳೆಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗ, ವಿಜ್ಞಾನದ ಯುಗ ಎಂದು ಹೇಳಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರಾಭ್ಯಾಸ ಇದ್ದರೆ ಸಾಲದು. ಮಕ್ಕಳಿಗೆ ಅನ್ವೇಷಣೆ, ಸಂಶೋಧನೆ ಹಾಗೂ ಸೃಜನಾತ್ಮಕ ಮನೋಭಾವನೆಯನ್ನು ಬೆಳೆಸಲು ಇಂತಹ ವಿಜ್ಞಾನ ವಸ್ತು ಪ್ರದರ್ಶನ ಅನುಕೂಲಕರ ಎಂದರು.

ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ-ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ, ಆಹಾರ ಪದ್ಧತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ ಸೇರಿದಂತೆ ವಿವಿಧ ಮಾದರಿಗಳು ಶಿಕ್ಷಕರು ಹಾಗೂ ಪಾಲಕರ ಗಮನ ಸೆಳೆದವು.

ಪ್ರಾಂಶುಪಾಲ ಆನಂದ್, ಪುನೀತ್, ಮುಖ್ಯಶಿಕ್ಷಕ ಜಯಶೀಲ, ಮಹೇಶ್ ಗಂಜಿಗೆರೆ, ರಾಜು, ಶಾಲಾ ಶಿಕ್ಷಕ ವೃಂದ, ಮಕ್ಕಳ ಪಾಲಕರು, ವಿದ್ಯಾರ್ಥಿಗಳು ಹಾಜರಿದ್ದರು.