ಗುಂಡ್ಲುಪೇಟೆ ತಾಲೂಕಿನ ವಿಜಯಪುರ ಅಮಾನಿ ಕೆರೆಗೆ ನಿರಂಜನಕುಮಾರ್ ಬಾಗಿನ ಸಲ್ಲಿಸಿದರು. ಎನ್.ಮಲ್ಲೇಶ್, ಪಿ.ಗಿರೀಶ್, ಬಸವರಾಜು, ದೊಡ್ಡಹುಂಡಿ ಜಗದೀಶ, ಪ್ರಣಯ್, ಮುಖಂಡರಾದ ಮಾಡ್ರಹಳ್ಳಿ ನಾಗೇಂದ್ರ, ಬಿಳಿಗಿರಿನಾಯ್ಕ ಇದ್ದರು.  
ಜಿಲ್ಲೆ

ಸುಧಾರಿಸಿದ ಅಂತರ್ಜಲ ಮಟ್ಟ, ಸಮೃದ್ಧಿಯಾಗುತ್ತಿದೆ ಗುಂಡ್ಲುಪೇಟೆ ತಾಲೂಕು

ಗುಂಡ್ಲುಪೇಟೆ: ಈ ಬಾರಿ ಉತ್ತಮ ಮಳೆಬಿದ್ದ ಪರಿಣಾಮ ಕುಸಿದಿದ್ದ ತಾಲೂಕಿನ ಅಂತರ್ಜಲ ಮಟ್ಟ ಉತ್ತಮವಾಗುತ್ತಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಸಂತಸ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದಲ್ಲಿರುವ ವಿಜಯಪುರ ಅಮಾನಿಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿ, ಈ ಬಾರಿ ವರುಣನ ಕೃಪೆ ಹಾಗೂ ಕೆರೆಗಳಿಗೆ ನದಿನೀರು ತುಂಬಿಸಿದ್ದರಿಂದ ತಾಲೂಕಿನ ಎಲ್ಲ ಕೆರೆಗಳೂ ತುಂಬಿಹರಿದು ಕೋಡಿಬೀಳುತ್ತಿವೆ. ಇದರಿಂದ ಕಲ್ಲುಕಟ್ಟೆ ಜಲಾಶಯ, ವಿಜಯಪುರ ಅಮಾನಿಕೆರೆ ಹಾಗೂ ಚಿಕ್ಕಕೆರೆಗಳಿಗೆ ನೀರು ತುಂಬಿ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ. ಮಳೆ ನಿಂತರೂ ಕೆರೆಗಳು ಹಾಗೂ ಹಳ್ಳ ಕೊಳ್ಳಗಳಿಂದ ಸತತವಾಗಿ ಪಸಿ ನೀರು ಇನ್ನೂ ಹರಿದು ಬರುತ್ತಿದೆ. ಹಲವಾರು ವರ್ಷಗಳಿಂದ ಪಾತಾಳಕ್ಕೆ ಕುಸಿದಿದ್ದ ಅಂತರ್ಜಲ ಮಟ್ಟದಲ್ಲಿ ತುಂಬ ಸುಧಾರಣೆ ಕಾಣುತ್ತಿದ್ದು, ತಾಲೂಕು ಸಮೃದ್ಧಿಯತ್ತ ಸಾಗುತ್ತಿದೆ ಎಂದರು.

ಎಷ್ಟೇ ಆಳಕ್ಕೆ ಕೊರೆಸಿದರೂ ನೀರು ಸಿಗದಂತಾಗಿದ್ದ ರೈತರ ಜಮೀನುಗಳಲ್ಲಿ ಸಮೃದ್ಧವಾದ ನೀರು ದೊರಕುತ್ತಿರುವುದು ರೈತಾಪಿ ಜನರ ಸಂತಸಕ್ಕೆ ಕಾರಣವಾಗಿದೆ. ಚಿಕ್ಕಕೆರೆ ತುಂಬಿದ್ದರಿಂದ ಗುಂಡ್ಲು ಮಾರ್ಗದಲ್ಲಿ ನಲ್ಲೂರು ಅಮಾನಿಕೆರೆಗೆ ನೀರು ತುಂಬಿಸಲು ಕ್ರಮಕೈಗೊಳ್ಳಲಾಗಿದೆ. ಬರಪೀಡಿತವಾಗಿದ್ದ ತಾಲೂಕು ಸಮೃದ್ಧಿ ಕಾಣುತ್ತಿದೆ ಎಂದು ಹೇಳಿದರು.

ಬಗರ್‌ಹುಕುಂ ಸಮಿತಿಯ ಉಪಾಧ್ಯಕ್ಷ ನಿಟ್ರೆ ನಾಗರಾಜಪ್ಪ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎನ್.ಮಲ್ಲೇಶ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ಬಸವರಾಜು, ಶಶಿಧರ, ಸಿದ್ದಯ್ಯ, ಕಿರಣ್ ಗೌಡ, ಹುಂಡೀಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ, ಬಿಜೆಪಿ ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ಮುಖಂಡರಾದ ಮಾಡ್ರಹಳ್ಳಿ ನಾಗೇಂದ್ರ, ಬಿಳಿಗಿರಿನಾಯಕ ಸೇರಿದಂತೆ ಹಲವರು ಇದ್ದರು.