ಜಿಲ್ಲೆ

ಸುಧಾರಣೆ ಕಾಣುವುದೇ ಪಾರ್ಕಿಂಗ್ ವ್ಯವಸ್ಥೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ದಿನೇ ದಿನೇ ವಾಹನಗಳ ಹೆಚ್ಚುತ್ತಲೇ ಇವೆ. ಆದರೆ ಅದಕ್ಕೆ ತಕ್ಕಂತೆ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಪಾರ್ಕಿಂಗ್ ಸಮಸ್ಯೆಯೂ ಬೆಳೆಯುತ್ತಲೇ ಇದೆ. ಪಾದಚಾರಿ ಮಾರ್ಗ (ಫುಟ್‌ಪಾತ್) ಹಾಗೂ ರಸ್ತೆ ಬದಿ ಜಾಗವೇ ವಾಹನ ನಿಲುಗಡೆಗೆ ಸ್ಥಳವಾಗಿದೆ. ಇದರಿಂದ ಸುಲಭ ಸಂಚಾರಕ್ಕೆ ಕಿರಿಕಿರಿಯಾಗಿದೆ.
ನಗರದ ವಾಣಿಜ್ಯ ಮಳಿಗೆ ಇರಲಿ ಪ್ರಮುಖ ಸ್ಥಳವಾದ ಮಾರುಕಟ್ಟೆಯಲ್ಲೂ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ಇದರಿಂದ ವಾಹನ ಸವಾರರಿಗೆ ನಿತ್ಯ ಸಂಕಷ್ಟ ಇದ್ದದ್ದೇ. ಮಾರುಕಟ್ಟೆಯಲ್ಲಿ ಬೈಕ್ ನಿಲುಗಡೆಗೇ ಜಾಗವಿಲ್ಲ. ಇನ್ನು ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್‌ಗೆ ಜಾಗ ಹುಡುಕುವುದೇ ದೊಡ್ಡ ಸವಾಲು.
ಮಹಾನಗರ ಪಾಲಿಕೆ ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಕಾರ್ಯಾಚರಣೆ ನಡೆಸಿ ಪಾರ್ಕಿಂಗ್ ಜಾಗ ಒತ್ತುವರಿ ತೆರವು ಮಾಡುತ್ತಾರೆ ವಿನಃ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿಲ್ಲ. ಪಿ.ಮಣಿವಣ್ಣನ್ ಪಾಲಿಕೆ ಆಯುಕ್ತರಾಗಿದ್ದಾಗ ನಡೆದಂತಹ ಅತಿಕ್ರಮಣ ತೆರವನ್ನು ತಕ್ಕಮಟ್ಟಿಗೆ ತ್ರಿಲೋಕಚಂದ್ರ ಮುನ್ನಡೆಸಿದ್ದರು. ಆದರೆ ನಂತರ ಬಂದ ಆಯುಕ್ತರು ಇದರ ಗೋಜಿಗೇ ಹೋಗಿಲ್ಲ. ಇದೇ ಕಾರಣಕ್ಕೆ ಪಾರ್ಕಿಂಗ್ ಸಮಸ್ಯೆ ಬೃಹದಾಕಾರವಾಗಿ ಬೆಳೆದು ರಸ್ತೆ ಪಕ್ಕದಲ್ಲೇ ವಾಹನ ನಿಲ್ಲಿಸುವ ಸ್ಥಿತಿ ಬಂದಿದೆ.
ಮಾರುಕಟ್ಟೆಗೆ ಆಗಮಿಸುವವರಿಗೆ ಆಝಾದ್ ಪಾರ್ಕ್, ವಿವೇಕಾನಂದ ವೃತ್ತ, ಸುಭಾಷ್ ರಸ್ತೆಯಲ್ಲಿ ಕಾರ್ ನಿಲುಗಡೆಗೆ ಅವಕಾಶ ಇದೆ. ಅದೂ ರಸ್ತೆ ಪಕ್ಕದಲ್ಲಿ. ಒಂದು ವೇಳೆ ಇಲ್ಲಿ ಜಾಗ ಸಿಗದಿದ್ದರೆ, ರಸ್ತೆ ಮೇಲೆಯೇ ವಾಹನ ನಿಲ್ಲಿಸುತ್ತಾರೆ. ಇದು ಮಾರುಕಟ್ಟೆ ಸ್ಥಿತಿಯಾದರೆ, ಜುಬಿಲಿ ವೃತ್ತದಿಂದ ಗಾಂಧಿನಗರವರೆಗಿನ ಸ್ಥಿತಿ ಸಹ ಇದಕ್ಕೆ ಹೊರತಾಗಿಲ್ಲ. ಈ ರಸ್ತೆಯಲ್ಲಿನ ಕೆಲ ವಾಣಿಜ್ಯ ಮಳಿಗೆಗಳಲ್ಲಿ ಪಾರ್ಕಿಂಗ್‌ಗೆ ಸೂಕ್ತ ಜಾಗ ಇರದಿರುವುದು ಒಂದೆಡೆಯಾದರೆ, ಬೇರೆ ಊರುಗಳಿಗೆ ತೆರಳುವವರು ಫುಟ್‌ಪಾತ್ ಮೇಲೆ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಇದರಿಂದ ಗಾಂಧಿನಗರವರೆಗೆ ವಾಹನ ಸಂಚಾರಕ್ಕೆ ಸಾಕಷ್ಟು ಅಡೆತಡೆ ಉಂಟಾಗುತ್ತಿದೆ.
ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಧಾರಿಸುವುದೇ ಕಷ್ಟ ಎಂಬ ಸ್ಥಿತಿಗೆ ಬಂದಂತಾಗಿದೆ. ವ್ಯವಸ್ಥೆ ಇದ್ದ ಕಡೆಗಳಲ್ಲಿ ಜನರು ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುತ್ತಿದ್ದರೆ, ಕೆಲ ಕಡೆಗಳಲ್ಲಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಗೆ ನಿಲ್ಲಿಸುತ್ತಿದ್ದಾರೆ. ಈ ಸಮಸ್ಯೆಗೆ ಮುಕ್ತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಜಾರಿಗೆ ತರಲು ಇನ್ನಾದರೂ ಗಂಭೀರ ಚಿಂತನೆ ನಡೆಸಬೇಕು ಎಂಬುದು ಜನರ ಆಶಯ.
*ಎಚ್ಚರಿಕೆಗೂ ಕ್ಯಾರೆ ಎನ್ನದ ಜನ: ಕೆಲ ದಿನಗಳಿಂದ ಪೊಲೀಸರು ಗಸ್ತು ವಾಹನಗಳಲ್ಲಿ ಸಂಚಾರ ನಡೆಸಿ ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿದವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿದರೆ ದಂಡ ಹಾಕಿ ನೋಟಿಸ್ ಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ ಜನರು ಮಾತ್ರ ಇವರ ಎಚ್ಚರಿಕೆಗೆ ಕಿವಿಗೊಡುತ್ತಿಲ್ಲ. ಪೊಲೀಸರು ಬಂದಾಗ ವಾಹನ ತೆಗೆಯುವ ಜನರು ಪೊಲೀಸರು ಹೋದ ಬಳಿಕ ಮತ್ತೆ ವಾಹನ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ.

ಮಾರುಕಟ್ಟೆಗೆ ಆಗಮಿಸುವ ವಾಹನಗಳ ಸಂಖ್ಯೆಗೆ ತಕ್ಕಂತೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇನ್ನು ದಂಡ ಹಾಕಲು ಆಸಕ್ತಿ ತೋರುವ ಟ್ರಾಫಿಕ್ ಪೊಲೀಸರು ಪಾರ್ಕಿಂಗ್ ವ್ಯವಸ್ಥೆಗೂ ಸ್ವಲ್ಪ ಲಕ್ಷೃ ವಹಿಸಲಿ. ಇದಕ್ಕೆ ಪಾಲಿಕೆ ಸೂಕ್ತ ಜಾಗೆ ನೀಡಲಿ. ಬರೀ ಮಾರುಕಟ್ಟೆ ಮಾತ್ರವಲ್ಲಿ ನಗರದ ಉಳಿದ ಪ್ರದೇಶಗಳಲ್ಲಿ ಸಹ ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲ.*ಉದಯ ಯಂಡಿಗೇರಿ, ವ್ಯಾಪಾರಸ್ಥ.