ಜಿಲ್ಲೆ

ಸುಧರ್ಮಾ ಸಂಸ್ಕೃತ ಪತ್ರಿಕೆ ಸಾಧನೆ ಅನನ್ಯ: ಡಾ.ಜನಾರ್ದನ ಹೆಗಡೆ ಮೆಚ್ಚುಗೆ

reportermys

ಮೈಸೂರು: ಕಷ್ಟ ನಷ್ಟಗಳ ನಡುವೆಯೂ ಸಂಸ್ಕೃತದ ಮೇಲಿನ ಪ್ರೀತಿಗಾಗಿ ನಿರಂತರ 50 ವರ್ಷಗಳ ಕಾಲ ಸುಧರ್ಮ ಪತ್ರಿಕೆ ನಡೆಸಿಕೊಂಡು ಬಂದಿರುವುದು ಸಾಧನೆ ಎಂದು ಹಿರಿಯ ಪತ್ರಕರ್ತ ಡಾ.ಜನಾರ್ದನ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ನಾದಬ್ರಹ್ಮ ಸಭಾಂಗಣದಲ್ಲಿ ಭಾನುವಾರ ಸುಧರ್ಮಾ ದಿನಪತ್ರಿಕೆ ಆಯೋಜಿಸಿದ್ದ ಪತ್ರಿಕೆ ಸಂಸ್ಥಾಪಕ ಕೆ.ಎನ್.ವರದರಾಜ ಅಯ್ಯಂಗಾರ್ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಿಕೆಯ ಉತ್ಪಾದನಾ ವೆಚ್ಚ ಹೆಚ್ಚಿದ್ದು, ಮಾರಾಟದ ಮೌಲ್ಯ ಕಡಿಮೆ ಆಗುತ್ತಿದೆ. ಜಾಹೀರಾತಿನ ಬೆಂಬಲವಿಲ್ಲದೆ ಪತ್ರಿಕೆ ನಡೆಸುವುದು ಸಾಧ್ಯವೇ ಇಲ್ಲ. ಇಷ್ಟೆಲ್ಲ ಸಂಕಷ್ಟದ ನಡುವೆಯೂ ಸಂಸ್ಕೃತದ ಮೇಲಿನ ಪ್ರೀತಿಗಾಗಿ ನಿರಂತರ 50 ವರ್ಷಗಳ ಕಾಲ ಪತ್ರಿಕೆ ನಡೆದು ಬಂದಿರುವುದು ಸಾಧನೆ ಎಂದರು.
ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನ ವಿಶ್ರಾಂತ ಉಪನಿರ್ದೇಶಕ ಡಾ.ಟಿ.ವಿ.ಸತ್ಯನಾರಾಯಣ ಮಾತನಾಡಿ ವರದರಾಜರ ಜನ್ಮಶತಮಾನೋತ್ಸವದೊಂದಿಗೆ ಪತ್ರಿಕೆಯ 52ನೇ ವಾರ್ಷಿಕೋತ್ಸವವನ್ನೂ ಆಚರಿಸುತ್ತಿದ್ದೇವೆ. ಪತ್ರಿಕೆಯ ನಿರಂತರತೆಯನ್ನು ಕಾಯ್ದುಕೊಂಡು ಬರುವಲ್ಲಿ ವರದರಾಜ ಅಯ್ಯಂಗಾರ್ ಅವರ ಪುತ್ರ ದಿ.ಕೆ.ವಿ. ಸಂಪತ್ ಕುಮಾರ್ ಪಾತ್ರ ಮಹತ್ವದ್ದಾಗಿತ್ತು ಎಂದು ಬಣ್ಣಿಸಿದರು.
ಹಿರಿಯ ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ. ನಾಗರಾಜರಾವ್ ಮಾತನಾಡಿ, ಒಂದು ವಿಶ್ವವಿದ್ಯಾನಿಲಯ, ಸರ್ಕಾರಿ ಸಂಸ್ಥೆ ಮಾಡಬೇಕಾದ ಕಾರ್ಯವನ್ನು ಏಕಾಂಗಿಯಾಗಿ ಸುಧರ್ಮಾ ದಿನಪತ್ರಿಕೆ ಮಾಡುತ್ತಿದೆ. ಸಂಸ್ಕೃತ ಭಾಷಾ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಂಸ್ಕೃತ ವಿದ್ವಾಂಸ ವಸಂತ ಅನಂತ ಗಾಡ್ಗೀಳ್ ಅವರಿಗೆ ಸುಧರ್ಮಾ ಪತ್ರಿಕಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಗಿರೀಶ್ ಚಂದ್ರ ಅಧ್ಯಕ್ಷತೆ ವಹಿಸಿ ಶತಮಾನೋತ್ಸವ ವಿಶೇಷ ಸಂಚಿಕೆ, ಪುಸ್ತಕ ಬಿಡುಗಡೆ ಮಾಡಿದರು. ಇದೇ ಸಂದರ್ಭ ಪತ್ರಿಕೆ ನಡೆದುಬಂದ ದಾರಿಯ ಸಾಕ್ಷೃಚಿತ್ರ ಮತ್ತು ಚಿತ್ರಪ್ರದರ್ಶನ ಆಯೋಜಿಸಲಾಗಿತ್ತು.
ಸಂಪಾದಕಿ ಕೆ.ಎಸ್. ಜಯಲಕ್ಷ್ಮಿ, ಡಾ.ಎಚ್.ಆರ್. ವಿಶ್ವಾಸ್, ಕೆ.ನಾಗರಾಜು ಇದ್ದರು.