ಜಿಲ್ಲೆ

ಸುದ್ದಿ ಬಿತ್ತರದಲ್ಲಿ ಅವಸರ ಸಲ್ಲ

ಜಗಳೂರು: ಮಾಧ್ಯಮಗಳು ಸಂವಿಧಾನದ ನಾಲ್ಕನೇ ಅಂಗ. ಆ ನಂಬಿಕೆಯನ್ನು ಉಳಿಸಿಕೊಂಡು ಸ್ವಾಭಿಮಾನದಿಂದ ಕೆಲಸ ಮಾಡಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ತಾಲೂಕು ಪತ್ರಕರ್ತರ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.
ಸಮಾಜದಲ್ಲಿ ಪತ್ರಕರ್ತರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮಾಧ್ಯಮಗಳು ಮತ್ತು ಪತ್ರಕರ್ತರು ಜನರ ನಂಬಿಕೆ ಉಳಿಸಿಕೊಂಡು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ನಮ್ಮಲ್ಲೇ ಮೊದಲು ಎಂಬ ಧಾವಂತದಲ್ಲಿ ಸತ್ಯಾಸತ್ಯತೆ ಅರಿಯದೆ, ಸುದ್ದಿ ಪ್ರಕಟಿಸಲಾಗುತ್ತಿದೆ. ಸತ್ಯಕ್ಕೆ ಧಕ್ಕೆ ಬಾರದಂತೆ ನೈಜತೆ ತಿಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳು ಪ್ರಸಾರವಾಗುತ್ತಿವೆ. ಪತ್ರಕರ್ತರು ಸ್ವವಿಮರ್ಶೆಗೆ ಒಡ್ಡಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ದೇಹದ ರೋಗಕ್ಕೆ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸಿದಂತೆ ಸಾಮಾಜಿಕ ರೋಗಗಳಿಗೆ ಪತ್ರಕರ್ತ ಚಿಕಿತ್ಸಕನಾಗಿ ಕೆಲಸ ಮಾಡಬೇಕಿದೆ. ಪತ್ರಕರ್ತರು ನಡೆ, ನುಡಿಯಲ್ಲಿ ಶುದ್ಧವಾಗಿರಬೇಕು. ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಪತ್ರಕರ್ತರಾಗಿದ್ದರು. ಅವರ ಆದರ್ಶಗಳನ್ನು ರೂಢಿಸಿಕೊಂಡು ಸಮಾಜಕ್ಕೆ ಚಿಕಿತ್ಸೆ ಕೊಡುವಂಥ ಕೆಲಸ ಪತ್ರಕರ್ತರಿಂದ ಆಗಬೇಕು. ಸತ್ಯದ ಮಾರ್ಗದಲ್ಲಿ ಪತ್ರಕರ್ತರು ಸಾಗಬೇಕು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ ಮಾತನಾಡಿ, ಎಲ್ಲರೂ ಪತ್ರಕರ್ತರಾಗಲು ಸಾಧ್ಯವಿಲ್ಲ. ಪತ್ರಕರ್ತರ ಮೇಲೆ ಸಮಾಜ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದು, ಸುದ್ದಿ ಮಾಡುವ ಧಾವಂತದಲ್ಲಿ ವಿವೇಚನೆ, ತಾಳ್ಮೆ ಕಳೆದುಕೊಳ್ಳಬಾರದು. ವಿಶ್ವಾಸಾರ್ಹತೆ ಬಹಳ ಮುಖ್ಯವಾಗಬೇಕು ಎಂದರು.
ಹಿರಿಯ ಪತ್ರಕರ್ತರಾದ ಅಣಬೂರು ಮಠದ ಕೊಟ್ರೇಶ್, ಬಸವರಾಜ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮುಖಂಡ ಮಹಮದ್ ಗೌಸ್, ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಐಹೊಳೆ, ಉಪಾಧ್ಯಕ್ಷ ವಾಸೀಂ, ಖಜಾಂಚಿ ಜಗದೀಶ್, ಕಾರ್ಯದರ್ಶಿ ಜೆ.ಒ. ರವಿಕುಮಾರ್, ಪತ್ರಕರ್ತರಾದ ಸೋಮನಗೌಡ, ಮಹಾಂತೇಶ್ ಬ್ರಹ್ಮ, ಮಂಜಯ್ಯ, ಸಂದೀಪ್, ಮಹಾಲಿಂಗ, ರಕೀಬ್, ಎಚ್.ಎಂ ಹೊಳೆ ಮಹಾಲಿಂಗಪ್ಪ, ಉಜ್ಜನಪ್ಪ ಇತರರಿದ್ದರು.