ಸುತ್ತೂರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಉತ್ತರಪ್ರದೇಶ ಸಚಿವ ಯೋಗೇಂದ್ರ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು. ಎಸ್.ಪಿ. ಉದಯಶಂಕರ್, ಸಚಿವರ ಕುಟುಂಬ ವರ್ಗದವರು ಇನ್ನಿತರರು ಇದ್ದರು 
ಜಿಲ್ಲೆ

ಸುತ್ತೂರುಮಠಕ್ಕೆ ಉತ್ತರಪ್ರದೇಶದ ಸಚಿವ ಯೋಗೇಂದ್ರ ಉಪಾಧ್ಯಾಯ ಭೇಟಿ

ಮೈಸೂರು: ಶಿಕ್ಷಣದಲ್ಲಿ ಸಂಸ್ಕಾರ ಅತ್ಯವಶ್ಯವಾಗಿದೆ ಎಂದು ಉತ್ತರಪ್ರದೇಶದ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞ್ಞಾನ ಸಚಿವ ಯೋಗೇಂದ್ರ ಉಪಾಧ್ಯಾಯ ಹೇಳಿದರು.


ಸುತ್ತೂರು ಜೆಎಸ್‌ಎಸ್ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತಮ ನಾಗರಿಕರಾಗಲು ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ದೇಶ ಮೊದಲು ಎಂಬ ಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜೆಎಸ್‌ಎಸ್ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರವಾಗಿದೆ. ಕೇವಲ ರಾಜ್ಯದ ವಿದ್ಯಾರ್ಥಿಗಳಿಗಷ್ಟೆ ಅಲ್ಲದೇ, ಉತ್ತರಪ್ರದೇಶ, ಜಾರ್ಖಂಡ್, ಬಿಹಾರ ಹಾಗೂ ಈಶಾನ್ಯ ರಾಜ್ಯಗಳಾದ ಮೇಘಾಲಯ, ಮಣಿಪುರ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ನೀಡುತ್ತಿರುವುದು ಪೂಜ್ಯರ ಸರ್ವಧರ್ಮ ಸಹಿಷ್ಣುತೆ ತೋರಿಸುತ್ತದೆ. ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಮೂಲಕ ಶ್ರೀಮಠವು ಉತ್ತಮ ಸೇವೆ ಒದಗಿಸುತ್ತಿದೆ. ಇಲ್ಲಿ ನಿಮಗೆ ಶ್ರೀಗಳ ಆಶೀರ್ವಾದದಿಂದ ಸಕಲ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣ ಲಭಿಸುತ್ತಿದ್ದು, ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ಸಂಸ್ಥೆಯ ಆಡಳಿತಾಧಿಕಾರಿ ಎಸ್.ಪಿ.ಉದಯಶಂಕರ್, ಸಚಿವರ ಕುಟುಂಬ ವರ್ಗದವರು ಹಾಗೂ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.