ಜಿಲ್ಲೆ

ಸುತ್ತೂರು ಶ್ರೀ ಜನ್ಮದಿನ-ಪುಣ್ಯಸ್ಮರಣೆ:ಅನ್ನ ಸಂತರ್ಪಣೆ

 ಹಾಸನ: ನಗರದ ಮಹಾವೀರ ವೃತ್ತದ ಬಳಿ ಮೈಸೂರಿನ ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಅವರ 109 ನೇ ಜನ್ಮ ದಿನಾಚರಣೆ ಹಾಗೂ ಸ್ಮರಣೆ ಅಂಗವಾಗಿ ಪರಮಪೂಜ್ಯ ಸುತ್ತೂರು ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ದಾಸೋಹಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸದಾಚಾರ, ಧರ್ಮನಿಷ್ಠೆ ಮತ್ತು ಸಕಾರಾತ್ಮಕ ಶಕ್ತಿ ಹೊಂದಿರುವ ಶ್ರೀ ಮಠವು, ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿದ್ದು, ಮಠವು ಸಾಮಾಜಿಕ ಪ್ರಗತಿಯಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದು ಅನೇಕರು ಆಡಿದ ಮಾತನ್ನು ಉದ್ಗರಿಸಿದರು.

ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ದೇಶದಲ್ಲಿ ಶಾಂತಿ ನೆಲೆಸಬೇಕು. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಯವರು ಸಮಾಜದಲ್ಲಿ ಶಾಂತಿ ನೆಲೆಸಲಿ. ಅಭಿವೃದ್ಧಿ ಆಗಲೆಂದು ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಕಾಯಕ ಎನ್ನುವ ಸಾಮಾಜಿಕ ಸೇವೆ ಆರಂಭಿಸಿದರು. ಸುತ್ತೂರು ಮಠದಲ್ಲಿ ಸಮಾಜದ ಅಭಿವೃದ್ಧಿಗಾಗಿ ಸೇವೆಯನ್ನು ಎಲ್ಲಾ ಜನಾಂಗದವರಿಗೂ ನೀಡಿದ್ದಾರೆ. ನಮ್ಮ ಧರ್ಮದ ಏಕತೆ ಮತ್ತು ಸಮಗ್ರತೆ ಮತ್ತು ಸನಾತನ ಧರ್ಮದ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಸಾಧುಗಳು ಮತ್ತು ಸಂತರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಶ್ರೀಗಳು ಚಿಂತನಶೀಲ ಮತ್ತು ಸಂವೇದನಾಶೀಲರು ಮತ್ತು ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಪೋಷಕರಾಗಿದ್ದರು. ಸಮಾಜದ ಅಸಮಾನತೆ, ಬಡತನ ಮತ್ತು ಅನಕ್ಷರತೆಯ ಸಮಸ್ಯೆ ಹೋಗಲಾಡಿಸಲು, ಅನೇಕ ಸಕಾರಾತ್ಮಕ ಕ್ರಮ ತೆಗೆದುಕೊಂಡಿದ್ದರು ಎಂದು ಹೇಳಿದರು.

ಸಾಮಾಜಿಕ-ಆರ್ಥಿಕ ಬದಲಾವಣೆಗಳನ್ನು ಮಾಡುವ ಮೂಲಕ ಸಮಾಜವನ್ನು ಸ್ವಾವಲಂಬಿಯನ್ನಾಗಿ ಮಾಡಲು, ಜೆಎಸ್‌ಎಸ್ ಮಹಾವಿದ್ಯಾಪೀಠವು ಸಾಮಾಜಿಕ ಸಮಾನತೆ, ಸಮೃದ್ಧಿ, ಶ್ರೇಷ್ಠತೆ, ಸಬಲೀಕರಣ, ಉದ್ಯಮಶೀಲತೆ ಮತ್ತು ಜ್ಞಾನೋದಯಕ್ಕಾಗಿ ಎಲ್ಲರಿಗೂ ಅಮೂಲ್ಯವಾದ ಶಿಕ್ಷಣ ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಜೆಎಸ್‌ಎಸ್ ಮಹಾವಿದ್ಯಾಪೀಠದ ಆಶ್ರಯದಲ್ಲಿ, ಅವರು ಅಕ್ಷರ ದಾಸೋಹಕ್ಕಾಗಿ ಶಾಲೆ ಮತ್ತು ಕಾಲೇಜುಗಳನ್ನು ಪ್ರಾರಂಭಿಸಿದರು. ಅನ್ನ ದಾಸೋಹಕ್ಕಾಗಿ ವಸತಿ ಮತ್ತು ಆರೋಗ್ಯ ದಾಸೋಹಕ್ಕಾಗಿ ಆಸ್ಪತ್ರೆಗಳನ್ನು ಪ್ರಾರಂಭಿಸಿರುವುದಾಗಿ ಹೇಳಿದರು.ಈ ವೇಳೆ ಹಾಜರಿದ್ದ ವಿವಿಧ ಮಠಾಧೀಶರು, ಲಿಂಗಕ್ಯ ಶ್ರೀಗಳ ಸಾಧನೆ-ಸೇವೆಯನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಶ್ರೀ ಜವೇನಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾವೇದಿಕೆಯ ರಾಜ್ಯ ಸಮಿತಿ ಸದಸ್ಯ ವಸಂತ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎನ್. ಪರಮೇಶ್, ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಸಮಾಜದ ಮುಖಂಡರಾದ ಪ್ರಸನ್ನ , ಧರ್ಮ, ತೇಜು ಮೂರ್ತಿ, ದೇವರಾಜ್ ಇತರಿದ್ದರು. ಬಳಿಕ ಸಾವಿರಾರು ಜನರಿಗೆೆ ಅನ್ನ ಸಂತರ್ಪಣೆ ಮಾಡಲಾಯಿತು.