ನಂಜನಗೂಡು: ಆಧುನಿಕ ಸಮಾಜದಲ್ಲಿ ಕೌಟುಂಬಿಕ ಸಂಬಂಧಗಳು, ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಸಮಾಜವನ್ನು ತಿದ್ದಿ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೈಂಕರ್ಯವನ್ನು ಸುತ್ತೂರು ಶ್ರೀಮಠ ಮಾಡುತ್ತಿರುವುದು ಶ್ಲಾಘನೀಯ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಬುಧವಾರ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಭಜನಾಂಜಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಅಜ್ಜ, ಅಜ್ಜಿ ಮಕ್ಕಳಿಗೆ ಸಾಮಾಜಿಕ ಬದಲಾವಣೆ ತರುವಂತಹ ಸಂಬಂಧಗಳನ್ನು ಗಟ್ಟಿಗೊಳಿಸುವಂತಹ ರಾಮಾಯಣ, ಮಹಾಭಾರತ, ರಾಮ-ಕೃಷ್ಣನ ಕಥೆಗಳನ್ನು ಹೇಳುತ್ತಿದ್ದರು. ಆದರೆ ಈಗಿನ ಸಮೀಕ್ಷೆಗಳ ಪ್ರಕಾರ ಅಜ್ಜ, ಅಜ್ಜಿಯರನ್ನು ವೃದ್ಧಾಶ್ರಮ, ಅನಾಥಶ್ರಮಗಳಿಗೆ ಸೇರಿಸುವಂತಹ ಪ್ರವೃತ್ತಿ ಹೆಚ್ಚಾಗಿದೆ. ಹೀಗಾಗಿ, ಮುಂದಿನ ತಲೆಮಾರಿಗೆ ರಾಮ, ಕೃಷ್ಣರ ಕಥೆ ಗೊತ್ತಿಲ್ಲ. ಹಾಗಾಗಿ ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ತಂಗಿ, ಮಾವ ಅತ್ತೆ ಇಂತಹ ಸಂಬಂಧಗಳ ಮಹತ್ವದ ಬಗ್ಗೆ ಅರಿವಿರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದಿನ ಕಾಲದಲ್ಲಿ ಗ್ರಾಮಗಳಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವಂತಹ ಭಜನೆಗಳು ಜರುಗುತ್ತಿದ್ದವು. ಈ ಭಜನೆಗಳು ವ್ಯಕ್ತಿಯಲ್ಲಿ ಹೊಸ ಸಂಚಲನ ಮೂಡಿಸುವ ಜತೆಗೆ ಆತ್ಮಸ್ಥೈರ್ಯ ತುಂಬುವಂತಹ ಹೊಸ ಬದುಕನ್ನು ಕಟ್ಟಿಕೊಡುವಂತಹ ಸನ್ನಿವೇಶ ನಿರ್ಮಾಣವಾಗುತ್ತಿತ್ತು. ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲೂ ಭಜನೆ ಕಾರ್ಯಕ್ರಮಗಳು ಕಣ್ಮರೆಯಾಗುತ್ತಿವೆ. ಆದ್ದರಿಂದ ಯುವಕರು ನಮ್ಮ ನೆಲದ ಕಲೆ, ಮತ್ತು ಸಂಸ್ಕೃತಿಗಳಿಂದ ದೂರಾಗುತ್ತಿದ್ದಾರೆ. ಹಾಗಾಗಿ ಭಜನೆ ಕಲೆೆಯನ್ನು ಇಂದಿನ ಮಕ್ಕಳು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೃಷಿಗೆ ಸಂಬಂಧಿಸಿದಂತಹ, ಗೋ ರಕ್ಷಣೆ, ಮನುಷ್ಯನ ಬದುಕನ್ನು ಗಟ್ಟಿಗೊಳಿಸುವಂತಹ ಹತ್ತಾರು ಯೋಜನೆಗಳನ್ನು ನಿರ್ವಹಿಸುತ್ತಿದೆ. ಅಲ್ಲದೆ ಧಾರ್ಮಿಕ ಸಂರಕ್ಷಣೆ ಜತೆಗೆ ಶೈಕ್ಷಣಿಕ ಪ್ರಗತಿ ಮೂಲಕ ಸರ್ಕಾರ ಮಾಡುವಂತಹ ಕೆಲಸವನ್ನು ನಿರ್ವಹಿಸುತ್ತಿದೆ. ಇದು ಕರ್ನಾಟಕ ರಾಜ್ಯದಲ್ಲಿ ಒಂದು ದಾಖಲೆಯಾಗಿದೆ. ಆದ್ದರಿಂದಲೇ, ಮುಖ್ಯಮಂತ್ರಿ, ಸರ್ಕಾರಗಳೂ ಸುತ್ತೂರು ಮಠವನ್ನು ಗೌರವಿಸುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಶನಾಡೆ ಗೋವಿಂದಭಟ್, ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜು ಇತರರಿದ್ದರು.