ಬೇಲೂರು: ನಮ್ಮ ಸುತ್ತಮುತ್ತಲಿನ ವಾತಾವರಣವು ಹಸಿರಿನಿಂದ ಸುಂದರವಾಗಿ ಕಂಗೊಳಿಸುತಿದ್ದರೆ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರಲು ಪರಿಸರ ಸಹಕಾರಿಯಾಗಲಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಶ್ರುತಿ ಹೇಳಿದರು.
ತಾಲೂಕಿನ ಅನುಘಟ್ಟ ಸರ್ಕಾರಿ ಪ್ರೌಢಶಾಲೆ ಆವರಣ ಅರೇಹಳ್ಳಿ ಲಯನ್ಸ್ ಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದ ಅವರು, ಇತ್ತೀಚಿನ ಹವಾಮಾನ ವೈಪರೀತ್ಯದ ಪರಿಣಾಮ ಪ್ರಕೃತಿಯಲ್ಲಿ ಭಾರಿ ಬದಲಾವಣೆ ಉಂಟಾಗುತ್ತಿದೆ. ಮಳೆ ಕೊರತೆ, ನೆರೆ ಹಾವಳಿ ಸಂಭವಿಸುತ್ತಿವೆ. ಮರಗಳ ಮಾರಣ ಹೋಮದಿಂದ ನೀರಿನ ಹಿಂಗುವಿಕೆ ಕಡಿಮೆಯಾಗಿ ಜೀವ ಜಲದ ಕೊರತೆ ಉಂಟಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟು ಮುಂದಿನ ಪೀಳಿಗೆಗೂ ಪರಿಸರ ಉಳಿಸುವುದಕ್ಕೆ ಮುಂದಾಗಬೇಕು ಎಂದರು.
ಅರೇಹಳ್ಳಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ ಮಾತನಾಡಿ, ಮರ-ಗಿಡಗಳು ಸಮೃದ್ಧವಾಗಿದ್ದರೆ ಮಾತ್ರ ಮಾನವ ಕುಲ ಉಳಿಯುತ್ತದೆ. ಇಲ್ಲದಿದ್ದಲ್ಲಿ ಪ್ರಕೃತಿ ವಿಕೋಪ ಕಟ್ಟಿಟ್ಟ ಬುತ್ತಿ. ಇತ್ತೀಚಿನ ದಿನಗಳಲ್ಲಿ ಮರಗಳನ್ನು ಕಡಿಯುವುದು ಹೆಚ್ಚಾಗುತ್ತಿದ್ದು, ಗಿಡಗಳನ್ನು ನೆಟ್ಟು ಬೆಳೆಸುವುದು ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದ್ದರಿಂದ ನಮ್ಮ ಸಂಸ್ಥೆಯಿಂದ ವನ ಮಹೋತ್ಸವ ಆಚರಿಸಿ ಗಿಡಗಳನ್ನು ನೆಡಲಾಗುತ್ತಿದೆ ಎಂದರು.
ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಸಂಕಲ್ಪಾ ಮಾತನಾಡಿ, ನಮ್ಮ ದುಡಿಮೆಯ ಅಲ್ಪ ಭಾಗವನ್ನು ಸಮಾಜ ಸೇವೆ, ದೇಶ ಸೇವೆ ಹಾಗೂ ಮಣ್ಣಿನ ಅಭಿವೃದ್ಧಿಗೆ ಮೀಸಲಿಡಬೇಕು ಎಂಬುದೇ ನಮ್ಮ ಸಂಸ್ಥೆಯ ಧ್ಯೇಯೋದ್ದೇಶವಾಗಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಿದ್ದು ಎಲ್ಲರೂ ಪರಿಸರ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಲಯನ್ಸ್ ಸಂಸ್ಥೆ ಕೋಶಾಧಿಕಾರಿ ಸತೀಶ್, ವಲಯಾಧ್ಯಕ್ಷ ಜೆ.ಸಂತೋಷ್, ಪದಾಧಿಕಾರಿಗಳಾದ ಚಾಮರಾಜ್, ಪೃಥ್ವಿ, ಸೋಮಯ್ಯ, ಉಪ ವಲಯ ಅರಣ್ಯಾಧಿಕಾರಿ ಸುಭಾಷ್, ಪ್ರಭಾರ ಮುಖ್ಯ ಶಿಕ್ಷಕ ಪಾಟೀಲ್ ಸೇರಿದಂತೆ ಇತರರಿದ್ದರು.