ಹನೂರು: ಪಟ್ಟಣದ 10ನೇ ವಾರ್ಡ್ ವ್ಯಾಪ್ತಿಯ ಬನ್ನಿಮಂಟಪ ಬಡಾವಣೆಗೆ ಭಾನುವಾರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ನೇತೃತ್ವದ ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿತು.
ಮಿದುಳು ಜ್ವರ ಕಾಣಿಸಿಕೊಂಡ ಬಾಲಕಿ ಮನೆಗೆ ಡಾ.ಪ್ರಕಾಶ್ ಭೇಟಿ ನೀಡಿ ಮಾಹಿತಿ ಪಡೆದರು. ಮನೆ ಮುಂದೆ ನಿಂತಿರುವ ನೀರಿನಿಂದ ಹುಳುಗಳು ಉತ್ಪತ್ತಿಯಾಗಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಮಿದುಳು ಜ್ವರ ಕಾಣಿಸಿಕೊಂಡಿದೆ. ಈ ರೋಗವು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೊಳಚೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಪಟ್ಟಣ ಪಂಚಾಯಿತಿ ವತಿಯಿಂದ ಸಹಾಯಧನ ಪಡೆದು ಇಂಗುಗುಂಡಿಯನ್ನು ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ಅಧಿಕಾರಿಗಳ ಜತೆ ಚರ್ಚಿಸಿ ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡಿಸಲಾಗುವುದು. ನಿವಾಸಿಗಳು ಅಧಿಕಾರಿಗಳ ಜತೆ ಸಹಕರಿಸಬೇಕು. ಜ್ವರಕ್ಕೆ ತುತ್ತಾಗಿರುವ ವಿದ್ಯಾರ್ಥಿನಿಯ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಳಿಕ ವಾರ್ಡ್‌ನ ವಿವಿಧ ಬೀದಿಗಳಲ್ಲಿ ಸಂಚರಿಸಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಿವಾಸಿಗಳಿಗೆ ಅರಿವು ಮೂಡಿಸಿದರು. ಹಿರಿಯ ಆರೋಗ್ಯ ಅಧಿಕಾರಿ ನಿಂಬೇಶ, ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.