ಜಿಲ್ಲೆ

ಸುಗ್ರೀವಾಜ್ಞೆ ವಾಪಸ್‌ಗೆ ಆಗ್ರಹಿಸಿ ಮೋದಿ ಪ್ರತಿಕೃತಿ ದಹನ

ಕೋಲಾರ: ಭೂ ಸ್ವಾಧೀನ ಕಾಯ್ದೆ, ಕೆಪಿಟಿಸಿಎಲ್ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವುದನ್ನು ಕೈ ಬಿಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಕೀಲುಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಬಸ್ ನಿಲ್ದಾಣ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆ ಜಾರಿ ಮಾಡುವ ಮೂಲಕ ರೈತರನ್ನು ಶೋಷಣೆ ಮಾಡಲು ಹೊರಟಿವೆ. ಬೆಳೆಗೆ ಸೂಕ್ತ ಬೆಲೆ ನಿಗದಿಗೆ ಹೋರಾಟ ನಡೆಯುತ್ತಿದ್ದರೂ ಪರಿಗಣಿಸದೆ ಗಾಯದ ಮೇಲೆ ಬರೆ ಎಂಬಂತೆ ರೈತರಿಗೆ ಮತ್ತಷ್ಟು ತೊಂದರೆ ನೀಡುವ ಕಾಯ್ದೆ ಜಾರಿ ಮಾಡಲು ಹೊರಟಿವೆ ಎಂದು ಆರೋಪಿಸಿದರು.

ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿರುವುದನ್ನು ಕೂಡಲೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ 1980ರ ದಶಕದಲ್ಲಿ ರೈತ ವಿರೋಧಿ ಕಾನೂನು ಜಾರಿಮಾಡಲು ಹೊರಟ ಗುಂಡೂರಾವ್ ಸರ್ಕಾರಕ್ಕೆ ಆದ ಗತಿಯೇ ಬಿಜೆಪಿ ಸರ್ಕಾರಕ್ಕೂ ಬಂದೀತು ಎಂದು ಎಚ್ಚರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಮುಖಂಡರಾದ ನಂದಕುಮಾರ್, ಎಲ್.ಎನ್.ಬಾಬು, ಗಣೇಶ್, ಕೆ.ಎನ್. ಶಂಕರಪ್ಪ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.