ಜಿಲ್ಲೆ

ಸುಗ್ರಿವಾಜ್ಞೆ ವಾಪಸ್ ಪಡೆಯಲು ಒತ್ತಾಯ

ಚಿಕ್ಕಬಳ್ಳಾಪುರ: ರೈತರು ಮತ್ತು ವರ್ತಕರಿಗೆ ಮಾರಕವಾಗಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆಯನ್ನು ವಾಪಸ್ ಪಡೆಯಬೇಕು ಎಂದು ಸಿಪಿಎಂ ಪ್ರತಿಭಟನೆ ನಡೆಸಿತು.

ನಗರದಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಕೆಲ ಕಾಲ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಾರ್ಪೋರೇಟ್ ಕಂಪನಿಗಳಿಗೆ ಸರ್ಕಾರ ಮಣಿದು ಮಾರಕ ನಿಯಮಗಳನ್ನು ರೂಪಿಸುತ್ತಿದೆ ಎಂದು ಆರೋಪಿಸಿದರು. ಕರೊನಾ ಸಂಕಷ್ಟದ ಪರಿಹಾರದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರ ವಿರುದ್ಧ ವ್ಯಾಪಕವಾಗಿ ಹೋರಾಟ ನಡೆಸಲಾಗುತ್ತಿದೆ. ಆದರೂ ಕಿವಿಗೊಟ್ಟಿಲ್ಲ ಎಂದು ಜಿಲ್ಲಾ ಸಿಪಿಎಂ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಆರೋಪಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆ ವಾಪಸ್, ಬಡ ಜನರ ಹಸಿವು ನೀಗಿಸಲು ಒಂದು ವರ್ಷ ಹೆಚ್ಚಿನ ಪಡಿತರ ವಿತರಣೆ, ಸಾಲ ವಸೂಲಾತಿಗೆ ಕಡಿವಾಣ, ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿ, ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ, ವಲಸಿಗ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಬಿ.ಎನ್.ಮುನಿಕೃಷ್ಣಪ್ಪ, ಎ.ಎಂ.ನಾಗೇಶ್, ಎ.ಟಿ.ರಾಮಕೃಷ್ಣ, ಸುರೇಶ್, ಸಂತೋಷ್ ಮತ್ತಿತರರು ಇದ್ದರು.