ಸುಗ್ಗಿ ದೇವರಬನದ ಒತ್ತುವರಿ ಜಾಗದಲ್ಲಿ ಕಾಫಿ ತೋಟ ಮಾಡಿರುವುದು. 
ಜಿಲ್ಲೆ

ಸುಗ್ಗಿ ದೇವರಬನದ 5.50 ಎಕರೆ ಒತ್ತುವರಿ ತೆರವು

ಸೋಮವಾರಪೇಟೆ: ಶಾಂತಳ್ಳಿ ಹೋಬಳಿಯ ತಲ್ತಾರೆಶೆಟ್ಟಳ್ಳಿ ಗ್ರಾಮದ ಸುಗ್ಗಿದೇವರಬನ ದೇವರಕಾಡು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಸಾಗುವಳಿ ಮಾಡಿದ್ದ 5.50 ಎಕರೆ ಜಾಗವನ್ನು ಅರಣ್ಯ ಇಲಾಖೆ ತೆರವುಗೊಳಿಸಿ ಸುಪರ್ದಿಗೆ ಪಡೆದುಕೊಂಡಿತು.


ಸುಗ್ಗಿದೇವರ ಬನದ ಸಂ.ನಂ 2/1ರಲ್ಲಿ 5.50 ಎಕರೆ ಜಾಗವನ್ನು ಅಬ್ಬಿಮಠ ಗ್ರಾಮದ ಜಿ.ಟಿ.ಬೋಜರಾಜ್ ಅವರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿಕೊಂಡಿದ್ದರು. ಸೋಮವಾರಪೇಟೆ ಅರಣ್ಯ ಇಲಾಖೆಯಲ್ಲಿ ಒತ್ತುವರಿ ಪ್ರಕರಣ ದಾಖಲಾಗಿತ್ತು. ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 2018ರ ಜುಲೈ 16ರಂದು 64(ಎ) ಅಡಿ ಒತ್ತುವರಿ ಜಾಗವನ್ನು ತೆರವುಗೊಳಿಸಲು ಆದೇಶ ನೀಡಿದ್ದರು. ಒತ್ತುವರಿದಾರರು ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕೊಡಗು ವೃತ್ತದ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು.


ಸೋಮವಾರಪೇಟೆ ಉಪ ವಿಭಾಗದ ಅದೇಶವನ್ನು ಎತ್ತಿಹಿಡಿದ ಮೇಲ್ಮನವಿ ಪ್ರಾಧಿಕಾರ, 2023ರ ಫೆಬ್ರವರಿ 10ರಂದು ಒತ್ತುವರಿದಾರರ ಮೇಲ್ಮನವಿಯನ್ನು ವಜಾಗೊಳಿಸಿ, 30 ದಿನಗಳ ಒಳಗೆ ಒತ್ತುವರಿ ತೆರವುಗೊಳಿಸಿ, ಅರಣ್ಯ ಇಲಾಖೆಯ ಸುಪರ್ದಿಗೆ ಪಡೆದುಕೊಳ್ಳಲು ಆದೇಶಿಸಿತ್ತು.


ಹಿರಿಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿ, ಕಾಫಿ, ಕಿತ್ತಳೆ ಇನ್ನಿತರ ವಾಣಿಜ್ಯ ಬೆಳೆಗಳನ್ನು ತೆರವುಗೊಳಿಸಿ, ಹಿಟಾಚಿ ಯಂತ್ರದ ಮೂಲಕ ಜಾನುವಾರು ನಿರೋಧಕ ಕಂದಕ ತೋಡಿ, ಪೂರ್ಣ ಪ್ರಮಾಣದಲ್ಲಿ ಇಲಾಖೆಯ ವಶಕ್ಕೆ ಪಡೆದುಕೊಂಡಿತು.


ತೆರವು ಕಾರ್ಯಾಚರಣೆಯಲ್ಲಿ ಎಸಿಎಫ್ ಎ.ಎ. ಗೋಪಾಲ್, ಆರ್‌ಎಫ್‌ಒ ಚೇತನ್, ಡಿಆರ್‌ಎಫ್‌ಒ ಸತೀಶ್, ಅರಣ್ಯ ಪಾಲಕರಾದ ಕಿರಣ್, ವಿಶ್ವ, ಕರಿಮಲ್ಲಪ್ಪ, ಪೊಲೀಸರು, ದೇವರಕಾಡು ಸಂರಕ್ಷಣಾ ಸಮಿತಿ ಅಧ್ಯಕ್ಷರು, ಗ್ರಾಮಸ್ಥರು ಇದ್ದರು.