ಕೊಡಗು : ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಸದಸ್ಯರು, ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಸದಸ್ಯರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಗುರುವಾರ ಸಭೆ ನಡೆಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯ ಬಾಲು ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಯಿತು.
ಗೋಣಿಕೊಪ್ಪಲು ಸಬ್ ಇನ್ಸ್‌ಪೆಕ್ಟರ್ ದೀಕ್ಷಿತ್ ಮಾತನಾಡಿ, ಪ್ರಕರಣ ದಾಖಲಿಸುವುದು ನಮ್ಮ ಉದ್ದೇಶವಲ್ಲ. ಸಂಚಾರ ನಿಯಮ ಪಾಲನೆಯಾಗಬೇಕು. ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಗೋಣಿಕೊಪ್ಪಲು ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಹಲವಾರು ಫಲಕಗಳನ್ನು ಅಳವಡಿಸಬೇಕು. ವಾಹನವನ್ನು ಸರಿಯಾಗಿ ನಿಲುಗಡೆ ಮಾಡುವ ಸಲುವಾಗಿ ರಸ್ತೆಯಲ್ಲಿ ನಿಲುಗಡೆಗಾಗಿ ಬಣ್ಣ ಬಳಿಯುವ ಕೆಲಸವಾಗಬೇಕು ಎಂದು ಸಭೆಯ ಗಮನಕ್ಕೆ ತಂದರು.
ಮನ್ನಕ್ಕಮನೆ ಸೌಮ್ಯ ಬಾಲು ಮಾತನಾಡಿ, ಪಾಕಿರ್ಂಗ್ ವ್ಯವಸ್ಥೆಯಲ್ಲಿ ನಾಲ್ಕು ಚಕ್ರಗಳ ವಾಹನಗಳು ನಿಲ್ಲುವ ಕಡೆಗಳಲ್ಲಿ ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳು ನಿಲುಗಡೆ ಮಾಡುತ್ತಿದ್ದು, ಅವುಗಳನ್ನು ನಿಯಂತ್ರಿಸಬೇಕಿದೆ. ಅಲ್ಲಲ್ಲಿ ವಾಹನಗಳಲ್ಲಿ ವಸ್ತುಗಳನ್ನು ತುಂಬಿಕೊಂಡು ಪಾಕಿರ್ಂಗ್ ಸ್ಥಳದಲ್ಲಿ ಇಡೀ ದಿನ ನಿಲ್ಲಿಸಿ ವ್ಯಾಪಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದರು.
ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ ಮಾತನಾಡಿ, ಸುಗಮ ಸಂಚಾರ ವ್ಯವಸ್ಥೆಗೆ ಚೇಂಬರ್ ಆಫ್ ಕಾಮರ್ಸ್‌ನಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಸಂಚಾರ ನಿಯಂತ್ರಣಕ್ಕೆ ಬೇಕಾದ ಫಲಕಗಳನ್ನು ಪ್ರಾಯೋಜಿಸಲಾಗುವುದು ಎಂದರು.
ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಮುಖ್ಯರಸ್ತೆಯಿಂದ ಬೈಪಾಸ್ ರಸ್ತೆಗೆ ಮತ್ತು ಪೊನ್ನಂಪೇಟೆ ರಸ್ತೆಯಿಂದ ಮೈಸೂರು ರಸ್ತೆಗೆ ಎರಡು ಸೇತುವೆಗಳನ್ನು ನಿರ್ಮಿಸುವ ಮೂಲಕ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರೆ, ಮುಖ್ಯ ರಸ್ತೆಯಲ್ಲಿ ಉಂಟಾಗುವ ಸಂಚಾರ ಸಮಸ್ಯೆಯನ್ನು ಪರಿಹರಿಸಬಹುದು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಸರ್ಕಾರದೊಂದಿಗೆ ವ್ಯವಹರಿಸಿ ಎರಡು ಸೇತುವೆಗಳನ್ನು ನಿರ್ಮಿಸುವ ಕುರಿತು ಕ್ರಮವಹಿಸಬೇಕಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್.ಪ್ರಕಾಶ್ ಮಾತನಾಡಿ, ಪಾಕಿರ್ಂಗ್ ವ್ಯವಸ್ಥೆಯಲ್ಲಿ ರಸ್ತೆಗೆ ಬಣ್ಣ ಬಳಿಯುವ ಮೂಲಕ ಸರಿಯಾದ ವಾಹನ ಪಾಕಿರ್ಂಗ್ ವ್ಯವಸ್ಥೆ ಮಾಡಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ಗೋಣಿಕೊಪ್ಪಲು ನಗರಕ್ಕೆ ಸುತ್ತು ಮುತ್ತಲ ಗ್ರಾಮಗಳಿಂದ ತ್ಯಾಜ್ಯ ವಸ್ತುವನ್ನು ತಂದು ಸುರಿಯುವ ಸಮಸ್ಯೆ ಉಂಟಾಗಿದೆ. ಅದರ ಬಗ್ಗೆ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಪ್ರಕರಣ ದಾಖಲಿಸುವ ಮೂಲಕ ನಿಯಂತ್ರಿಸಬೇಕಿದೆ ಎಂದರು.
ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಪ್ರಭಾಕರ್ ನೆಲ್ಲಿತಾಯ, ಗ್ರಾಮ ಪಂಚಾಯಿತಿಯ ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಶರತ್ ಕಾಂತ್ ಮಾತನಾಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೈತ್ರಾ ಚೇತನ್, ಮಾಜಿ ಅಧ್ಯಕ್ಷ ಕೆ.ರಾಜೇಶ್, ಸದಸ್ಯರುಗಳಾದ ರಾಮಕೃಷ್ಣ, ಹಕೀಂ, ಸುಲೇಖಾ, ಸಪೂರಾ, ಅಫ್ಸಲ್, ರತಿ ಅಚ್ಚಪ್ಪ, ಮಂಜುಳಾ, ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಕೋಶಾಧಿಕಾರಿ ಮನೋಹರ್, ನಿರ್ದೇಶಕ ಪಿ.ಜಿ.ರಾಜಶೇಖರ್, ಪಿಡಿಒ ಪಿ.ವಿ.ಶ್ರೀನಿವಾಸ್, ಗುರುಶ್ರೀ ಇದ್ದರು.