ಕೊಟ್ಟೂರು: ರಾಜ್ಯದಲ್ಲಿ ಶೇ.45 ಹುದ್ದೆಗಳು ಖಾಲಿಯಿದ್ದು, ಒಬ್ಬ ನೌಕರ ಎರಡರಿಂದ ಮೂರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯ ಇದೆ. ಇದರಿಂದಾಗಿ ಸರ್ಕಾರಿ ನೌಕರರು ತೀವ್ರ ಒತ್ತಡದಲ್ಲಿದ್ದು, ನೆಮ್ಮದಿ ಇಲ್ಲದಂತಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹೇಳಿದರು.
ಪಟ್ಟಣದಲ್ಲಿ ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ರಾಜ್ಯಾಧ್ಯಕ್ಷರಿಗೆ ಸನ್ಮಾನ ಹಾಗೂ ತಾಲೂಕು ಸರ್ಕಾರಿ ನೌಕರರ ಪದಗ್ರಹಣ ಸಮಾರಂಭದಲ್ಲಿ ಗುರುವಾರ ಮಾತನಾಡಿದರು. ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಆಡಳಿತ ಸುಗಮವಾಗಿ ನಡೆಯಲಿದೆ ಎಂದರು.
ಕೇಂದ್ರ ಸರ್ಕಾರದ 8ನೇ ಆಯೋಗಕ್ಕೆ ಸಮನಾಗಿ ವೇತನ ಮತ್ತು ಒಪಿಎಸ್ ಜಾರಿ ಮಾಡಬೇಕು ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ಇನ್ನೂ ಒಂದೂವರೆ ವರ್ಷದೊಳಗೆ ಜಾರಿ ಮಾಡದಿದ್ದರೆ ಯಾವುದೇ ಹೋರಾಟಕ್ಕೂ ಸಿದ್ಧ. ರಾಜ್ಯದ ನೂತನ ತಾಲೂಕುಗಳಲ್ಲಿ ಸರ್ಕಾರಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಈ ಕುರಿತು ಮುಖ್ಯಮಂತ್ರಿ ಬಳಿ ವಿಷಯ ಪ್ರಸ್ತಾಪಿಸಿದ್ದೇನೆ ಎಂದರು.
ಸಂಘದ ನಿಕಟಪೂರ್ವ ತಾಲೂಕು ಅಧ್ಯಕ್ಷ ಜಗದೀಶ, ಅಧ್ಯಕ್ಷ ಯೋಗೀಶ್ವರ ದಿನ್ನೆಗೆ ಅಧಿಕಾರ ಹಸ್ತಾಂತರಿಸಿದರು. ತಾಲೂಕು ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಷಡಾಕ್ಷರಿಗೆ ಯೋಗೀಶ್ವರ ದಿನ್ನೆ ಕೋರಿದರು.