ತಿ.ನರಸೀಪುರ: ಸುಗಂಧರಾಜ ಹೊವು ಖರೀದಿಯನ್ನು ಸ್ಥಗಿತಗೊಳಿಸಿ ನೆರೆಯ ರಾಜ್ಯದಿಂದ ಹೂವು ಖರೀದಿಗೆ ಮುಂದಾಗಿರುವ ಸ್ಥಳೀಯ ಕಾರ್ಖಾನೆಯಲ್ಲಿ ನಿರ್ಧಾರದಿಂದ ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ಹಳೇ ತಿರುಮಕೂಡಲಿನಲ್ಲಿ ಮಂಗಳವಾರ ಸುಗಂಧರಾಜ ಹೂವು ಬೆಳೆಗಾರರು ಹಾಗೂ ವರ್ತಕರು ಹೂವನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.
ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಸ್ಥಳೀಯವಾಗಿರುವ ಸುಗಂಧರಾಜ ಹೊವು ಬೆಳೆಗಾರ ರೈತರಿಗೆ ಅನ್ಯಾಯವಾಗುತ್ತಿದ್ದು, ಸ್ಥಳೀಯ ಹೂವು ಖರೀದಿ ಮಾಡದೆ ನೆರೆಯ ತಮಿಳುನಾಡು ರಾಜ್ಯದಿಂದ ಹೂವನ್ನು ಸರಬರಾಜು ಮಾಡಿಕೊಳ್ಳುತ್ತಿರುವ ಕೆಂಪಯ್ಯನಹುಂಡಿ ಗ್ರಾಮದ ನ್ಯಾಚುರಲ್ ಎಸೆನ್ಸಿಯಲ್ ಆಯಿಲ್ ಪ್ರೈ.ಲಿ ಕಾರ್ಖಾನೆಯ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ, ಖರೀದಿ ಮಾಡದಿರುವ ಹೂವನ್ನು ರಸ್ತೆಗೆ ಸುರಿದು ಪ್ರತಿಭಟಿಸಿದರು.
ರೈತ ಮುಖಂಡ ಕೆಬ್ಬೆಹುಂಡಿ ಶಿವಕುಮಾರ್ ಮಾತನಾಡಿ, ವರುಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೆಂಪಯ್ಯನ ಹುಂಡಿ ಗ್ರಾಮದ ಬಳಿಯಿರುವ ನ್ಯಾಚುರಲ್ ಎಸೆನ್ಸಿಯಲ್ ಆಯಿಲ್ ಪ್ರೈ.ಲಿ.ಕಾರ್ಖಾನೆಯಲ್ಲಿ ಸ್ಥಳೀಯರು ಬೆಳದ ಸುಗಂಧರಾಜ ಹೂವು ಖರೀದಿ ಮಾಡುವುದನ್ನು ದಿಢೀರ್ ಅಂತ ಸ್ಥಗಿತಗೊಳಿಸಿ, ನೆರೆ ರಾಜ್ಯ ತಮಿಳುನಾಡಿನಿಂದ ಖರೀದಿಸುವ ಮೂಲಕ ಇಲ್ಲಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಗಮನಹರಿಸಿ, ಕಾರ್ಖಾನೆಯವರು ಸ್ಥಳೀಯ ಸುಗಂಧರಾಜ ಹೂವು ಖರೀದಿಸುವಂತೆ ಸೂಚಿಸಬೇಕು. ಇದೇ ವಿಷಯವಾಗಿ ಕಳೆದ ವರ್ಷವೂ ಧರಣಿ ಮಾಡಿದಾಗ ಸ್ಥಳೀಯರಿಂದ ಹೂವು ಖರೀದಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಕಾರ್ಖಾನೆ ಮುಖ್ಯಸ್ಥರು ಈಗ ತಮ್ಮ ವರಸೆಯನ್ನೇ ಬದಲಾಯಿಸಿದ್ದಾರೆ. ಹಾಗಾಗಿ ಸಿಎಂ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ರೈತರ ಹೂವನ್ನು ಖರೀದಿಸುವಂತೆ ಕಾರ್ಖಾನೆ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸುಂಗಧರಾಜ ಹೂವು ಬೆಳೆಗಾರರಾದ ನಾಗರಾಜು, ರೇವಣ್ಣ, ಮಹದೇವಸ್ವಾಮಿ, ಮಹದೇವಣ್ಣ, ಚಿಕ್ಕನಂಜಯ್ಯ, ಸಿದ್ದಣ್ಣ, ಈಶಣ್ಣ, ಬಾಬು, ಮರಡೇಶ್, ಮಹೇಶ್, ಸಂತೋಷ್ ಕುಮಾರ್, ಮಹೇಶ್, ಕಿರಣ್, ಮಹದೇವ ಪ್ರಸಾದ್, ಶಿವರಾಮ್ ಮತ್ತಿತರ ರೈತ ಮುಖಂಡರು ಹಾಜರಿದ್ದರು.