ಜಿಲ್ಲೆ

ಸುಖಾಂತ್ಯ ಕಂಡ ಪುರಸಭೆ ಸದಸ್ಯನ ನಾಪತ್ತೆ ಪ್ರಕರಣ...!

ಮಂಡ್ಯ: ನಾಗಮಂಗಲ ಪುರಸಭೆಯ 18ನೇ ವಾರ್ಡ್‌ನ ಜೆಡಿಎಸ್ ಬೆಂಬಲಿತ ಸದಸ್ಯ ಪಿ.ಮಂಜುನಾಥ್(ಮೆಡಿಕಲ್ ಮಂಜು) ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ನಾಪತ್ತೆಯಾಗಿದ್ದ ಸದಸ್ಯ ಪಿ.ಮಂಜುನಾಥ್ 16 ಗಂಟೆಯಲ್ಲೇ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಣಿಸಿಕೊಂಡಿದ್ದಾರೆ.
ಗುರುವಾರ ರಾತ್ರಿ ವ್ಯಾಪಾರ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಈ ಸಂಬಂಧ ಈತನ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಾಸಕ ಸುರೇಶ್‌ಗೌಡ ಬಣದಿಂದ ಚುನಾಯಿತನಾಗಿದ್ದ ಮಂಜುನಾಥ್, ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ರಾಜಕೀಯ ತಿರುವು ಪಡೆದುಕೊಂಡಿತ್ತು.
ಸದಸ್ಯನ ಅಪಹರಣ ಕುರಿತಾದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಪೊಲೀಸರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದಿದ್ದರು. ಇನ್ನು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸದಸ್ಯ ಮಂಜುನಾಥ್, ಅಪರಿಚಿತರು ನನ್ನನ್ನು ಅಪಹರಿಸಿದ್ದರು. ಆದರೆ ಅವರು ಯಾರೆಂಬುದು ನನಗೆ ಪರಿಚಯವಿಲ್ಲ. ಶುಕ್ರವಾರ ಮಧ್ಯಾಹ್ನ ಕುಣಿಗಲ್‌ವರೆಗೆ ತಂದು ಬಿಟ್ಟು ಹೋದರು. ಅಲ್ಲಿಂದ ಬಸ್ ಹತ್ತಿ ನಾನು ನಾಗಮಂಗಲ ತಲುಪಿರುವುದಾಗಿ ತಿಳಿಸಿದರು.