ಈ ಭೂಮಂಡಲ ಸುಂದರಗೊಳಿಸಲು ಮಳೆ ಸುರಿಯುತ್ತದೆ. ಈ ನಿಸರ್ಗ ಹಚ್ಚ ಹಸಿರು ಮತ್ತು ನದಿಗಳು ತುಂಬಿ ಹರಿಯುತ್ತಿವೆ…
ನದಿಗಳ ಪ್ರಯಾಣದ ದಾರಿಯುದ್ದಕ್ಕೂ ಹಚ್ಚ ಹಸಿರು. ಮನುಷ್ಯರು ತಮ್ಮ ಜೀವನ ಪ್ರಯಾಣದ ಅಂತ್ಯದವರೆಗೂ ಈ ನಿಸರ್ಗ ಸೌಂದರ್ಯವನ್ನು ಆನಂದದಿಂದ ಅನುಭವಿಸಬೇಕು.
ಒಂದು ಹನಿಯ ಬಿಂದು ಹುಲ್ಲಿನ ಎಲೆಯ ಮೇಲೆ ಕುಳಿತಿತ್ತು. ಆಗ ಎಲೆ ಕೇಳಿತು- ನೀನು ಎಲ್ಲಿಂದ ಬಂದೆ? ನಾನು ಬಹಳ ದೂರದಿಂದ ಪ್ರಯಾಣ ಮಾಡುತ್ತ ಬಂದಿದ್ದೇನೆ ಎಂದಿತು ಹನಿ.
ಎಲೆ ಹೇಳಿತು- ನೀನು ಇಲ್ಲೆ ಇದ್ದು ಬಿಡು. ಹನಿ ಹೇಳಿತು- ನಿನಗೆ ಬೇರುಗಳಿವೆ. ನನಗೆ ಬೇರು ಇಲ್ಲ. ನಾನು ಆಕಾಶದಿಂದ ಬಂದಿರುವೆ. ಮತ್ತೆ ಆಕಾಶಕ್ಕೆ ಹೋಗಬೇಕು…
ಹುಲ್ಲಿನ ಎಲೆ ಕೇಳಿತು- ನಿನಗೆ ಕಾಲು ಇಲ್ಲ. ಹೇಗೆ ಮೇಲೆ ಹೋಗಲು ಸಾಧ್ಯ?
ಸ್ವಲ್ಪ ತಾಳು, ಹೇಗೆ ಹೋಗುತ್ತೇನೆ ನೋಡಬಹುದು ಅಂದಿತು ನೀರಿನ ಹನಿಯ ಬಿಂದು. ಸೂರ್ಯ ಕಿರಣಗಳು ಬರಲು ಪ್ರಾರಂಭವಾಯಿತು. ಕಿರಣದ ಜೊತೆ ಹನಿಯ ಬಿಂದು ಆನಂದದಿಂದ ಮೇಲೆ ಹೋಯಿತು.
ಒಂದು ಕ್ಷಣದ ಪ್ರಯಾಣ ಮಾಡಿದರೂ ಹನಿ ಅಷ್ಟೊಂದು ಆನಂದದಿಂದ ಇರುತ್ತದೆ. ನಾವೂ ಹಾಗೆಯೇ, ಪ್ರಯಾಣ ಮುಗಿಸಿ ಹೋಗುವವರು. ಏಕೆ ಆನಂದಿಂದ ಇರಬಾರದು?!
ನಮ್ಮನ್ನು ಕರೆದುಕೊಂಡು ಹೋಗಲು ಕಾಲದ ಸೂರ್ಯ ಬರುತ್ತಾನೆ. ನಾವು ಹೋಗಲೇಬೇಕಾಗುತ್ತದೆ. ನಾವೂ ಪ್ರಯಾಣಿಕರು ಅಂತ ನೆನಪಿಟ್ಟುಕೊಳ್ಳಬೇಕು.
ಜೀವನದಲ್ಲಿ ಯಾವಾಗಲೂ ಸುಖ ಇರುವುದಿಲ್ಲ. ದುಃಖವೂ ಇರುತ್ತದೆ. ಜತೆಗೆ, ನಿಂದನೆ ಮಾಡುವವರೂ ಇರುತ್ತಾರೆ. ನಾವು ಇಷ್ಟು ಜನಗಳ ಜತೆ ಇರುತ್ತೇವೆ ಅಂದರೆ ಇವೆಲ್ಲ ಇರುತ್ತವೆ.
ಈಗ ಒಂದು ವೈರಸ್ ಬಂದಿದೆ ಎಂದು ಮುಖ ಗಂಟು ಹಾಕಿಕೊಂಡು ಕುಳಿತರೆ ಹೇಗೆ? ಹೆಚ್ಚು ಕಡಿಮೆ ಆಗುವುದೇ… ಇದ್ದಷ್ಟು ದಿನ ಆನಂದದಿಂದ ಬದುಕಲು ಕಲಿಯಬೇಕು. ನಗುನಗುತಾ ನಲಿ ಮನುಷ್ಯನೇ, ವೈರಸ್ ನಗುನಗುತಾ ಹೋಗುತ್ತದೆ…
ಅಮೆರಿಕದ ಒಬ್ಬ ಸಂತ ಹೇಳುತ್ತಾನೆ. ನಿನ್ನ ಕಾಲಿಗೆ ಏನಾದರೂ ಹಾಕಿ ನಡೆ. ಭೂಮಿಗೆ ಹಾಸಿಗೆ ಹಾಸಿ ನಡೆಯಲು ಪ್ರಯತ್ನಿಸಬೇಡ. ಭೂಮಿಯಲ್ಲಿ ಮುಳ್ಳು, ಕಂಟಿ, ಕಲ್ಲು ಇರುವುದೇ…
ಜೀವನದಲ್ಲಿ ಕಷ್ಟ ಸುಖ ನಿಂದನೆ ಇರುವುದೇ. ನಿನ್ನಷ್ಟಕ್ಕೆ ನೀನು ಬದುಕು. ನಿನ್ನ ಜೀವನ ಸುಂದರ…
ಶ್ರೀರಾಮಚಂದ್ರ ಸಿರಿವಂತ ರಾಜ. ರಾವಣ ಬಂದ. ದುಃಖ ಬಂತು. ಸೀತೆ ಸಿಕ್ಕಳು. ಆನಂದ ಆಯಿತು. ಜನತೆ ನಿಂದನೆ ಮಾತುಗಳನ್ನಾಡಿದರು. ಮತ್ತೆ ದುಃಖ…
ಅದಕ್ಕೇ ವಾಲ್ಮೀಕಿ ಮಹರ್ಷಿಗಳು ನಮ್ಮ ಜೀವನದ ಬಗ್ಗೆ ರಾಮಾಯಣ ಬರೆದರು. ರಾಮಾಯಣದಲ್ಲಿ ಏನು ಬರೆದಿದ್ದಾರೋ ಅದೆಲ್ಲ ನಮ್ಮ ಜೀವನದಲ್ಲಿ ನಡೆಯುತ್ತಿದೆ…
ಅಕ್ಕಮಹಾದೇವಿಯವರು ಹೇಳುತ್ತಾರೆ. ಅರಣ್ಯದಲ್ಲಿ ಮನೆ ಕಟ್ಟಿ ಪ್ರಾಣಿಗಳಿಗೆ ಹೆದರುವುದೇ? ಸಂತೆಯಲ್ಲಿ ಮನೆ ಕಟ್ಟಿ (ಗದ್ದಲ ಎಂದು) ಸಂತೆಯನ್ನು ನಿಂದಿಸುವುದೇ? ಸಮುದ್ರದಂಚಲ್ಲಿ ಮನೆ ಕಟ್ಟಿ ತೆರೆಗಳನ್ನು ನಿಂದಿಸುವುದೇ…
ನಾವು ಅರಣ್ಯದಲ್ಲಿ ಮನೆ ಕಟ್ಟಿದರೆ ಅಲ್ಲಿಯ ಪ್ರಾಣಿಗಳ ಜೊತೆ ಹೊಂದಾಣಿಕೆಯಿಂದ ಜೀವಿಸಬೇಕು. ಪ್ರಾಣಿಗಳನ್ನು ನಿಂದಿಸುವುದು ಸರಿಯೆ?
ಸಂತೆ ಅಂದ್ರೆ ಯಾವಾಗಲೂ ಗದ್ದಲ. ಅಲ್ಲಿ ಮನೆ ಕಟ್ಟಿದ ಮೇಲೆ ಜನತೆಯನ್ನು ನಿಂದನೆ ಮಾಡುವುದೇಕೆ?
ಮನುಷ್ಯನೇ, ನೀನು ಎಲ್ಲಿಯಾದರೂ ಇರು. ಸುಖ, ದುಃಖ, ನಿಂದನೆ ಇರುವುದೇ. ಅದರ ಜೊತೆ ಹೊಂದಾಣಿಕೆಯಿಂದ ಇರುವುದೇ ಆನಂದ ಜೀವನ. ಭಾರತದಲ್ಲಿ ಋತುಗಳನ್ನು ಮಾಡಿಕೊಂಡಿದ್ದೇವೆ. ನಾಲ್ಕು ತಿಂಗಳಿಗೆ ಒಮ್ಮೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಬರುತ್ತದೆ. ಈ ಋತುಗಳ ಜೊತೆ ನಾವು ಹೊಂದಾಣಿಕೆ ಆಗಿ ಬದುಕಬೇಕು.
ಯಾವಾಗಲೂ ಮಳೆ ಇದ್ದರೆ ಬದುಕಲು ಸಾಧ್ಯವೆ? ಅದೇ ತರಹ ಯಾವಾಗಲೂ ಸುಖ ಇರಲು ಸಾಧ್ಯವೇ?
ಅರಿತು ಜೀವನ ಸಾಗಿಸಿದರೆ ಜೀವನ ಸುಂದರ ಆಗುತ್ತದೆ. ಗ್ರೀಕ್ ದೇಶದ ಮಹಾಸಂತ ಸಾಕ್ರೆಟಿಸ್ ಎಲ್ಲಿ ಹೋದರೂ ಜನವೋ ಜನ. ಅವನ ಮಾತು ಕೇಳಲು ಸಾವಿರಾರು ಜನ ಮುಗಿಬೀಳುತ್ತಿದ್ದರು. ಆಕೆ ಅಥೆನ್ಸ್ ಪಟ್ಟಣದ ಅತಿಸುಂದರಿ, ಮಧುರವಾದ ಹಾಡುಗಾರ್ತಿ. ಅವಳಿಗೆ ಸಾವಿರಾರು ಅಭಿಮಾನಿಗಳು. ಅವಳು ಒಂದು ದಿನ ಸಾಕ್ರೆಟಿಸ್ನನ್ನು ಭೇಟಿ ಮಾಡಿ ವಾದ ಮಾಡಿದಳು. ನಾನು ಒಂದು ನಿಮಿಷದಲ್ಲಿ ನಿಮ್ಮ ಯುವಕರ ಸೈನ್ಯವನ್ನು ನನ್ನ ಕಡೆ ಸೆಳೆಯಬಲ್ಲೆ ಅಂದಳು…
ಸಾಕ್ರೆಟಿಸ್ ಹೇಳುತ್ತಾನೆ. ಒಂದು ಕಲ್ಲನ್ನು ತಳದಿಂದ ಗುಡ್ಡದ ಮೇಲೆ ಒಯ್ದು ಇಡುವುದು ಎಷ್ಟೊಂದು ಕಷ್ಟ. ಆದರೆ, ಆ ಕಲ್ಲನ್ನು ಗುಡ್ಡದ ಮೇಲಿಂದ ದೂಡುವುದು ಸರಳ. ಮೊದಲು ಒಂದು ಕಲ್ಲನ್ನು ಗುಡ್ಡದ ಮೇಲೆ ಒಯ್ದು ಇಡು. ಅದರ ತಾಪ, ಕಷ್ಟ ಎಷ್ಟು ಅಂತ ನಿನಗೆ ಅರ್ಥ ಆಗುತ್ತದೆ ಅಂತ ಅವಳಿಗೆ ಬುದ್ಧಿ ಹೇಳಿದ. ಸಾಕ್ರೆಟಿಸ್ ಎಂಥ ತತ್ವಜ್ಞಾನಿ ಎಂದು ಅವಳಿಗೆ ಅರ್ಥವಾಯಿತು. ಅಂದಿನಿಂದ ಆತನ ಅಭಿಮಾನಿಯಾದಳು. ನಿಂದನೆ ಮಾಡಲು ಎದುರಿಗೆ ಬಂದರೂ ಸಾಕ್ರೆಟಿಸ್ ತನ್ನ ಜ್ಞಾನದ ಮಾತುಗಳನ್ನು ನಿಲ್ಲಿಸಲಿಲ್ಲ…
ನಿರೂಪಣೆ: ತುಕಾರಾಂ ಬ. ಜಾಧವ ಕನಕೂರ