ಚಿಟಗುಪ್ಪ: ಧರ್ಮಗುರು ಬಸವಣ್ಣನವರು ವೈಚಾರಿಕತೆ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಲಿಂಗಾಯತ ಧರ್ಮ ಸ್ಥಾಪಿಸಿದ್ದು, ಅವರ ತತ್ವಗಳಂತೆ ಸಂಸ್ಕಾರ ಹಾಗೂ ಸಂಸ್ಕೃತಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಮನ್ನಾಎಖೇಳ್ಳಿ ಗ್ರಾಮದ ಬಸವ ಮಹಾಮಠದಲ್ಲಿ ಮಂಗಳವಾರ ಬಸವಧರ್ಮ ಸಮಾವೇಶ ಹಾಗೂ ಸಂಗೀತ, ನಾಟಕೋತ್ಸವದ ಪ್ರಶಸ್ತಿ ಪ್ರಧಾನ ಮತ್ತು ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬವಸ ಮಹಾಮಠದ ಮೂಲಕ ನಿರಂತರ ಧರ್ಮ ಕಾರ್ಯದೊಂದಿಗೆ ಬಸವಧರ್ಮ ಸಮಾವೇಶ ಮಾಡುತ್ತ ಈ ಭಾಗದ ಜನರಲ್ಲಿ ಬಸವ ಧರ್ಮದ ಪ್ರಚಾರ ಹಾಗೂ ಶೈಕ್ಷಣಿಕ ಸೇವೆಯೊಂದಿಗೆ ಮಾತೆ ಮೈತ್ರಾದೇವಿ ತಾಯಿ ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಮುದಗಲನ ಶ್ರೀ ಮಹಾಂತ ಸ್ವಾಮಿ, ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಆಧುನಿಕತೆ ಭರಾಟೆಯಲ್ಲಿ ಸಂಸಾರಗಳು ಹಾಗೂ ಸಮಾಜ ಉತ್ತಮ ರೀತಿಯಲ್ಲಿ ಸಾಗಬೇಕಾದರೆ ಬಸವ ತತ್ವ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಮಾಜಿ ಶಾಸಕ ಸುಭಾಷ ಕಲ್ಲೂರ ಮಾತನಾಡಿ, ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಸಂಸಾರ ಸುಖವಾಗಿ ನಡೆಯಬೇಕು. ತಂದೆ ತಾಯಿಗೆ ಮಕ್ಕಳು ಕಣ್ಣೀರು ಬರಿಸುವಂತೆ ಮಾಡದೆ ಇರಬೇಕೆಂದರೆ ಸಂಸ್ಕಾರ ಮುಖ್ಯ. ಇಂತಹ ಸಂಸ್ಕಾರ ಧರ್ಮದಿಂದ ದೊರೆಯಲು ಸಾಧ್ಯ ಎಂದರು.
ಮಾತೆ ಮೈತ್ರಾದೇವಿ ತಾಯಿ ನೇತೃತ್ವ ವಹಿಸಿದ್ದರು. ಕರ್ನಾಟಕ ಲೋಕಾಯುಕ್ತ ಉಚ್ಛ ನ್ಯಾಯಾಲಯ ಕಲಬುರಗಿಯ ವಿಶೇಷ ಸಾರ್ವಜನಿಕ ಅಭಿಯೋಜಕ ಗೌರೀಶ ಖಾಶೆಂಪುರ ಪ್ರಸ್ತಾವಿಕ ಮಾತನಾಡಿದರು. ಡಾ.ನೀತಾ ಶೈಲೇಂದ್ರ ಬೆಲ್ದಾಳೆ, ಉದ್ಯಮಿ ಜೈರಾಜ ಖಂಡ್ರೆ, ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠದ ಆಡಳಿತಾಧಿಕಾರಿ ಮೋಹನರೆಡ್ಡಿ, ಮಯೂರ ಬೆಲ್ದಾಳೆ, ಪಿಎಸ್‌ಐ ಮಹೇಂದ್ರಕುಮಾರ, ಪ್ರಮುಖರಾದ ನಾಗರಾಜ ಶೇರಿಕಾರ, ಶಂಕರರಾವ ಪಾಟೀಲ್ ಬನ್ನಳ್ಳಿ, ರಾಜಕುಮಾರ ತರಿ, ಶಿವಪುತ್ರಪ್ಪ ಸಾದಾ, ನಾಗೇಂದ್ರಪ್ಪ ವರವಟ್ಟಿ, ಬಸವರಾಜ ನಾರಾ, ಅಣ್ಣೆಪ್ಪ ರೋಡ್ಡ, ನವಲಿಂಗ ಪಾಟೀಲ್, ಶಾರದಾ ಪಾಟೀಲ್, ಗುರುಲಿಂಗಪ್ಪ ಉಳಗಡ್ಡಿ, ಶಿವರಾಜ ಮನ್ನಳ್ಳಿ ಇತರರಿದ್ದರು.
ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಮಠದಿಂದ ಬಸವಕಲ್ಯಾಣದ ಬಿಕೆಡಿಬಿ ಸಹಾಯಕ ಆಯುಕ್ತ ಜಗನಾಥರೆಡ್ಡಿ ಹೊಚಕನಳ್ಳಿ ಅವರಿಗೆ ಶ್ರೀ ಗುರುಭದ್ರೇಶ್ವರ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕಿ, ಮಾಂಜ್ರಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಶಕುಂತಲಾ ಕೆ.ಬೆಲ್ದಾಳೆ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು. ಗುರುಭದ್ರೇಶ್ವರ ಪ್ರಾಥಮಿಕ ಹಾಗೂ ಎಸ್.ಬಿ.ಶೇರಿಕಾರ ಪ್ರೌಢ ಶಾಲೆ, ನಿಡವಂಚಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬೀದರ್ನ ಬಸವ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ಮಹಾಕ್ರಾಂತಿ ನಾಟಕ ಪ್ರರ್ದಶನಗೊಂಡಿತ್ತು.