ಕಾನಹೊಸಹಳ್ಳಿ: ದೇಶದ ಪ್ರಗತಿಗೆ ಯುವಜನರ ಶಕ್ತಿ ಬಳಕೆಯಾಗಬೇಕು. ಸ್ವಾಮಿ ವಿವೇಕಾನಂದರ ಬೋಧನೆ ನಮಗೆಲ್ಲ ದಾರಿದೀಪವಾಗಬೇಕು ಎಂದು ಯುವ ಬ್ರಿಗೇಡ್ ಕಾರ್ಯಕರ್ತ ಕೆಂಚಮಲ್ಲನಹಳ್ಳಿ ಕೆ.ಜಿ.ಬಸವರಾಜ ತಿಳಿಸಿದರು.
ಗ್ರಾಮದ ಸ್ವಾಮಿ ವಿವೇಕಾನಂದ ಪಾಠದ ಮನೆಯಲ್ಲಿ ಯುವ ಬ್ರಿಗೇಡ್ ವತಿಯಿಂದ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನವನ್ನು ಸುಂದರ ಹಾಗೂ ಅರ್ಥಪೂರ್ಣವಾಗಿಸುವ ಸ್ವಾಮಿ ವಿವೇಕಾನಂದರ ವಾಣಿಯನ್ನು ಪ್ರತಿಯೊಬ್ಬರೂ ಓದಬೇಕಿದೆ ಎಂದರು.
ವಾಗ್ಮಿ ಚಕ್ರವರ್ತಿ ಸೂಲಿಬೆಲಿ ಮಾರ್ಗದರ್ಶನದಲ್ಲಿ ವಿವೇಕ ಮಾಲೆ ಧರಿಸುವ ಮೂಲಕ ಯುವಕರು ಸದೃಢ ದೇಹ ಮತು ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿರುವುದು ಶ್ಲಾಘನೀಯ. ವಿವೇಕ ಮಾಲೆ ಕಾರ್ಯಕ್ರಮದಲ್ಲಿ 18 ದಿನ ವ್ಯಾಯಾಮ, ಯೋಗ, ಧ್ಯಾನದಲ್ಲಿ ತೊಡಗುವಂಥ ಯುವಕರು ಉತ್ತಮ ಚಿಂತನೆಯಲ್ಲಿ ತೊಡಗುವಂತಾಗಲಿದೆ ಎಂದು ತಿಳಿಸಿದರು.
ಯುವ ಬ್ರಿಗೇಡ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್‌ಗಳನ್ನು ವಿತರಿಸಲಾಯಿತು. ಯುವ ಬ್ರಿಗೇಡ್ ಕಾರ್ಯಕರ್ತರಾದ ಕಣದಮನೆ ಶಿವಕುಮಾರ್, ತಿಪ್ಪೇಶ್, ಸುದೀಪ್, ಬಸವರಾಜ, ಸತೀಶ್, ಕ್ಲಿಂಟನ್, ಗುರುಮೂರ್ತಿ ಇತರರಿದ್ದರು.