ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಮೋಡ ಕವಿದ ವಾತಾವರಣವಿದ್ದು, ದಿಢೀರ್ ಸುರಿದ ಮಳೆಯಿಂದಾಗಿ ಸುಡು ಬಿಸಿಲಿನಿಂದ ಬೇಸತ್ತಿದ ಜನತೆಗೆ ತಂಪನ್ನು ನೀಡಿತು.
ಮಧ್ಯಾಹ್ನ 1.45 ಗಂಟೆಯಿಂದ 2.15 ರವರೆಗೆ ಧಾರಾಕಾರ ಮಳೆ ಸುರಿಯಿತು. ರಸ್ತೆ ಚರಂಡಿಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಿ ಪಟ್ಟಣವನ್ನು ಶುಚಿಗೊಳಿಸಿತು.
ನಾಕೂರು ಶಿರಂಗಾಲ, ಕಲ್ಲೂರು, ಕೊಡಗರಹಳ್ಳಿ, ಹೊಸಕೋಟೆ, ಗರಗಂದೂರು, ಮಾದಾಪುರ, ಹರದೂರು ಭಾಗಗಳಲ್ಲಿ ಅಂದಾಜು 1.5 ರಿಂದ 2.5 ಇಂಚುಗಳವರೆಗೆ ಮಳೆಯಾಗಿದ್ದು, ರೈತರು ಬೆಳೆಗಾರರು ಸಂತಸಗೊಂಡರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವೆ ಬಾವಿಗಳು ಜಲಮೂಲಗಳಿಂದ ಬತ್ತಿದ್ದು, ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಯಿಂದ ನೀರು ಪೂರೈಸಲು ವ್ಯತ್ಯಯವಾಗಿತ್ತು. ಏಪ್ರಿಲ್‌ನಲ್ಲಿ ಸುರಿದ ಈ ಮಳೆಯು ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ.