ಸುಂಟಿಕೊಪ್ಪ: ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಭಾನುವಾರ ಗರಿಗಳ ಹಬ್ಬ ಅಂಗವಾಗಿ ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಪೂಜೆ-ಪ್ರಾರ್ಥನೆ ಸಲ್ಲಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರು ಕಳೆದ 40 ದಿನಗಳಿಂದ ಉಪವಾಸ ಹಾಗೂ ಮಾಂಸಾಹಾರ ತ್ಯಜಿಸಿ ವ್ರತಾಚರಣೆಯಲ್ಲಿ ತೊಡಗಿದ್ದು, ಕೊನೆಯ ವಾರದ ಈ ದಿನಗಳನ್ನು ಪವಿತ್ರ ವಾರ(ಪಾಸ್ಕಕಾಲ)ವನ್ನಾಗಿ ಹಬ್ಬ ಆಚರಿಸುವುದು ವಾಡಿಕೆ.
ದೇವಾಲಯದ ಧರ್ಮಗುರುಗಳಾದ ಅರುಳ್ ಸೆಲ್ವಕುಮಾರ್, ಉಪಯಾಜಕರಾದ ಚಾಲ್ಸ್ ಅವರು ಸಂತ ಮೇರಿ ಶಾಲಾ ಮೈದಾನದಲ್ಲಿ ಬೆಳಗ್ಗೆ ತೆಂಗಿನ ಗರಿಗಳನ್ನು ಆಶೀರ್ವಚಿಸಿ ನಂತರ ಕ್ರೈಸ್ತರಿಗೆ ವಿತರಿಸಿದರು. ನಂತರ ಶಾಲಾವರಣದಿಂದ ದೇವಾಲಯದವರೆಗೆ ಗರಿಗಳನ್ನು ಹಿಡಿದು ಪ್ರಾರ್ಥನೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ದೇವಾಲಯದಲ್ಲಿ ಬಲಿಪೂಜೆ ಅರ್ಪಿಸುವ ಮೂಲಕ ಮುಂದಿನ ಪವಿತ್ರ ವಾರಕ್ಕೆ ಮುನ್ನುಡಿ ಇಡಲಾಯಿತು. ಸಂತ ಕ್ಲಾರ ಕನ್ಯಾಸ್ತ್ರೀ ಕಾನ್ವೆಂಟಿನ ಕನ್ಯಾಸ್ತ್ರೀಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಸಮುದಾಯದವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.