ಸುಂಟಿಕೊಪ್ಪ ಗ್ರಾಪಂ ಚುನಾವಣೆ ಮುಂದೂಡಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಜತೆ ಚರ್ಚೆ ನಡೆಸುತ್ತಿರುವ ಸದಸ್ಯರು. 
ಜಿಲ್ಲೆ

ಸುಂಟಿಕೊಪ್ಪ ಗ್ರಾಪಂ ಚುನಾವಣೆ 10ಕ್ಕೆ ಮುಂದೂಡಿಕೆ

ಸುಂಟಿಕೊಪ್ಪ: ಗುರುವಾರ ನಿಗದಿಯಾಗಿದ್ದ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಆ.10ಕ್ಕೆ ಮುಂದೂಡಲಾಯಿತು.

ಅಧ್ಯಕ್ಷ ಸ್ಥಾನವು ಬಿಸಿಎಂ(ಎ) ಮತ್ತು ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಗುರುವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣಾ ಪ್ರಕ್ರಿಯೆ ಪ್ರಾರಂಭಗೊಂಡಾಗ ಅಧ್ಯಕ್ಷ ಸ್ಥಾನಕ್ಕೆ 7 ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 2 ನಾಮಪತ್ರ ಸಲ್ಲಿಕೆಯಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ. ಬೆಂಬಲಿತ ಪಕ್ಷದ ಪಿ.ಆರ್.ಸುನಿಲ್, ಬಿ.ಎಂ.ಸುರೇಶ್, ಕಾಂಗ್ರೆಸ್ ಬೆಂಬಲಿತ ರಫೀಕ್ ಖಾನ್, ಆಲಿಕುಟ್ಟಿ, ಪಕ್ಷೇತರರಾಗಿ ಶಬ್ಬೀರ್ ಪ್ರಸಾದ್ ಕುಟ್ಟಪ್ಪ, ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ನಾಗರತ್ನ ಸುರೇಶ್ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶಿವಮ್ಮ ಮಹೇಶ್, ಬಿಜೆಪಿ ಬೆಂಬಲಿತ ಆಭ್ಯರ್ಥಿಯಾಗಿ ವಸಂತಿ ನಾಮಪತ್ರವನ್ನು ಸಲ್ಲಿಸಿದರು. ನಾಮಪತ್ರ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಚುನಾವಣೆಗೆಂದೇ ತಹಸೀಲ್ದಾರ್ ಅವರು ನೀಡುವ ಜಾತಿ ಪ್ರಮಾಣ ಪತ್ರದಲ್ಲಿ ಜಾತಿ ಸರಿಯಾಗಿ ನಮೂದಾಗದ ಕಾರಣ ಸಲ್ಲಿಕೆಯಾಗಿದ್ದ ಅಷ್ಟೂ ನಾಮಪತ್ರಗಳನ್ನು ತಿರಸ್ಕಾರ ಮಾಡಲಾಯಿತು. ಅಲ್ಲದೆ ಪ್ರಮಾಣ ಪತ್ರ ಒದಗಿಸಲು 7 ದಿನಗಳ ಕಾಲಾವಕಾಶ ನೀಡಿ ಚುನಾವಣೆಯನ್ನು ಆ.10ಕ್ಕೆ ಮುಂದೂಡಲಾಯಿತು.

ಹಠಾತ್ ಬೆಳವಣಿಗೆಯಿಂದ ಅಭ್ಯರ್ಥಿಗಳು ಅಚ್ಚರಿ ಮತ್ತು ಆಘಾತಗೊಳಗಾದರು. ಈ ವೇಳೆ ಕೆಲ ಅಸಮಾಧಾನಿತ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳೊಂದಿಗೆ ಚರ್ಚೆಗಿಳಿಸಿದರು. ಈ ಹಂತದಲ್ಲಿ ಕೆಲವು ಸದಸ್ಯರು ಚುನಾವಣೆ ಮುಂದೂಡುತ್ತಿದ್ದಂತೆ ಸಭೆಯಿಂದ ಹೊರನಡೆದರು.
ಬಿಜೆಪಿಯ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಎಸ್‌ಡಿಪಿಐನ ಜಿಲ್ಲಾ ಸಮಿತಿ ಸದಸ್ಯ ಉಸ್ಮಾನ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ವಿ.ಪಿ.ಶಶಿಧರ್ ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಅಪರಾಧ ವಿಭಾಗದ ಎಸ್‌ಐ ಎಚ್.ಸಿ.ಸ್ವಾಮಿ, ಸಿಬ್ಬಂದಿ ಬಂದೋಬಸ್ತ್ ಕಲ್ಪಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಚ್.ವೇಣುಗೋಪಾಲ್, ಸಿಬ್ಬಂದಿ ಪಾಲ್ಗೊಂಡಿದ್ದರು.