ಶನಿವಾರಸಂತೆ: ಅಂಗಡಿಗಳಿಗೆ ಹೊರಗಿನಿಂದ ಸರಕು ಸಾಗಿಸುವ ವಾಹನಗಳಿಂದ ಸುಂಕ ವಸೂಲಾತಿ ಮಾಡದಂತೆ ಸಮೀಪದ ಕೊಡ್ಲಿಪೇಟೆ ವರ್ತಕರ ಸಂಘದ ವತಿಯಿಂದ ಗ್ರಾಮ ಪಂಚಾಯಿತಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಕೊಡ್ಲಿಪೇಟೆ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳಿಗೆ ಸರಕು ಸಾಮಗ್ರಿ ತರುವ ವಾಹನಗಳಿಂದ ಗ್ರಾ.ಪಂ.ನಿಂದ ದುಬಾರಿ ಶುಲ್ಕ ವಸೂಲಾತಿ ಮಾಡುತ್ತಿದ್ದು, ಇದರಿಂದ ಅಂಗಡಿಗಳಿಗೆ ಸಾಮಗ್ರಿ ಸರಬರಾಜು ಮಾಡುವ ವಾಹನಗಳು ಗ್ರಾಮಕ್ಕೆ ಬರುತ್ತಿಲ್ಲ ಹಾಗೂ ಹೋಟೆಲ್ ಇತರ ಅಂಗಡಿಗಳಿಗೆ ಭೇಟಿ ನೀಡುವ ಟೂರಿಸ್ಟ್ ವಾಹನಗಳಿಗೂ ಸುಂಕ ವಿಧಿಸುತ್ತಿರುವುದರಿಂದ ಅಲ್ಲಿಗೂ ವಾಹನಗಳು ಬರುತ್ತಿಲ್ಲ. ಇದರಿಂದ ವರ್ತಕರಿಗೆ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದೆ ಎಂದು ವರ್ತಕರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದು, ಈ ನಿಟ್ಟಿನಲ್ಲಿ ಗ್ರಾ.ಪಂ. ಆಡಳಿತ ಅಂಗಡಿಗಳಿಗೆ ಸರಕು-ಸಾಮಗ್ರಿ ಸರಬರಾಜು ಮಾಡುವ ವಾಹನಗಳು ಮತ್ತು ಟೂರಿಸ್ಟ್ ವಾಹನಗಳಿಗೆ ಸುಂಕ ವಿಧಿಸದೆ ವರ್ತಕರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ವರ್ತಕರ ಸಂಘದ ಅಧ್ಯಕ್ಷ ಎಚ್.ಸಿ.ಯತೀಶ್‌ಕುಮಾರ್ ನೇತೃತ್ವದಲ್ಲಿ ಕೊಡ್ಲಿಪೇಟೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹೂವಯ್ಯ ಅವರಿಗೆ ವರ್ತಕರು ಮನವಿ ಪತ್ರ ನೀಡಿದರು. ಪ್ರಮುಖರಾದ ಎಚ್.ಎಂ.ದಿವಾಕರ್, ಬಿ.ಕೆ.ಯತೀಶ್, ಕುಮಾರ್, ರಮೇಶ್ ಇತರರು ಇದ್ದರು.