ಸುಗ್ಗರಾಜು.ಜಿ.ಕೆ. ನೆಲಮಂಗಲ: ಪಟ್ಟಣದ ಸೊಂಡೆಕೊಪ್ಪ ವೃತ್ತದ ಬಳಿ ನಿರ್ಮಿಸಲಾಗುತ್ತಿರುವ ಸ್ತ್ರೀಶಕ್ತಿ ಭವನ ಕಟ್ಟಡ ಕಾಮಗಾರಿ ಆರಂಭವಾಗಿ ಆರು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.
ತಾಲೂಕಿನಲ್ಲಿರುವ ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಕಚೇರಿ ಹಾಗೂ ಸಂಘದಲ್ಲಿನ ಮಹಿಳೆಯರು ಸಿದ್ಧಪಡಿಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಭವನ ನಿರ್ಮಾಣಕ್ಕೆ 2014ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ಅಧಿಕಾರಿ, ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.
ಭವನ ನಿರ್ಮಾಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 25 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ ಕಟ್ಟಡ ನಿರ್ಮಾಣದ ಜಾಗದಲ್ಲಿ ಬಂಡೆ ಸಿಕ್ಕ ಪರಿಣಾಮ ಹೆಚ್ಚುವರಿಯಾಗಿ 20 ಲಕ್ಷ ರೂ. ವೆಚ್ಚ ಆಗುತ್ತದೆ ಎಂದು ಕಟ್ಟಡ ನಿರ್ಮಾಣ ಹೊಣೆ ಹೊತ್ತ ಪಿಡಬ್ಲೂಡಿ ಇಲಾಖೆ ಅಂದಾಜಿಸಿತ್ತು. ಅದರಂತೆ 25 ಲಕ್ಷ ರೂ. ಮೊತ್ತದ ಅನುದಾನದಲ್ಲಿ ಕಟ್ಟಡ ಸಿದ್ಧವಾಗಿದ್ದು, ಕಟ್ಟಡಕ್ಕೆ ಪ್ಲಾಸ್ಟರಿಂಗ್, ನೆಲಹಾಸು, ನೀರಿನ ತೊಟ್ಟಿ, ಕಾಂಪೌಂಡ್ ಸೇರಿ ಬಣ್ಣ ಬಳಿಯುವ ಕಾರ್ಯಗಳು ಬಾಕಿ ಉಳಿದಿದ್ದು ಅನುದಾನದ ಕೊರತೆ ಎದುರಾಗಿದೆ.
ಸಿಎಸ್‌ಆರ್ ಅನುದಾನಕ್ಕೆ ಮನವಿ: ಭವನ ಕಾಮಗಾರಿ ಪೂರ್ಣಗೊಳಿಸಲು ಅವಶ್ಯವಿರುವ ಅನುದಾನಕ್ಕಾಗಿ ಇಲಾಖೆ ಅಧಿಕಾರಿಗಳು ಸಂಘಗಳ ಒಕ್ಕೂಟದಿಂದ ಕ್ಷೇತ್ರದ ಸಂಸದರು, ಶಾಸಕರು ಸೇರಿ ಪ್ರತಿಷ್ಠಿತ ಖಾಸಗಿ ಕಂಪನಿಗಳ ನೆರವು ಕೊರಲಾಗಿದೆ. ಹಿಂದಿನ ಸಂಸದ ವೀರಪ್ಪಮೊಯ್ಲಿ ಕಾಲಾವಧಿಯಲ್ಲಿ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿ ಕೆಲ ಕಾರ್ಯಗಳು ಮುಗಿದಿದ್ದು ಕಾಮಗಾರಿ ಪೂರ್ಣಗೊಳಿಸಲು ಇನ್ನೂ 10 ಲಕ್ಷ ರೂ. ಅನುದಾನದ ಅವಶ್ಯಕತೆ ಇದೆ. ಕೆಲ ಕಂಪನಿಗಳ ಸಿಎಸ್‌ಆರ್ ಅನುದಾನಕ್ಕೆ ಮನವಿ ಮಾಡಲಾಗಿದೆ.
ಭವನ ಪೂರ್ಣಗೊಂಡಿಲ್ಲದ ಕಾರಣ ಗ್ರಾಮೀಣ ಭಾಗದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕನಸು ಹಾಗೆಯೇ ಉಳಿದಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಅವಶ್ಯವಿರುವ ಅನುದಾನ ವ್ಯವಸ್ಥೆ ಮಾಡಿಕೊಟ್ಟು ಕಾಮಗಾರಿ ಪೂರ್ಣಗೊಳಿಸಬೇಕಿದೆ. ವೇದಾವತಿ, ತಾಲೂಕು ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಕಟ್ಟಡದಲ್ಲಿ ಬಾಕಿ ಉಳಿದುಕೊಂಡಿರುವ ಕಾರ್ಯಗಳನ್ನು ಮಾಡಲು ಅವಶ್ಯವಿರುವ ಅನುದಾನವನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡುವವರಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಲತಾ, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ