ಹುಬ್ಬಳ್ಳಿ: ಕರೊನಾ ಸೋಂಕಿತರು ವಾಸಿಸುವ ಮನೆಯಿಂದ 100 ಮೀ. ಸುತ್ತಮುತ್ತ ಬ್ಯಾರಿಕೇಡ್ ಹಾಕಿ ಸೀಲ್ಡೌನ್ ಮಾಡಿ ಯಾರೂ ಹೊರಗೆ ಬರದಂತೆ ಎಚ್ಚರಿಕೆ ನೀಡಿದ್ದರೂ ಜನ ಮಾತ್ರ ರಾಜಾರೋಷವಾಗಿ ರಸ್ತೆಗೆ ಇಳಿಯುತ್ತಿದ್ದಾರೆ.
ಇಲ್ಲಿನ ಕೇಶ್ವಾಪುರ ಆಜಾದ್ ಕಾಲನಿಯ 13 ವರ್ಷದ ಬಾಲಕಿಗೆ ಕರೊನಾ ಪಾಸಿಟಿವ್ ವರದಿ ಬಂದ ಬಳಿಕ ಈ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಸವೋದಯ ವೃತ್ತದಿಂದ ರಮೇಶ ಭವನದವರೆಗೆ ಬ್ಯಾರಿಕೇಡ್ ಅಳವಡಿಸಿ ಸಂಪೂರ್ಣ ಬಂದ್ ಮಾಡಲಾಗಿದೆ. ಮನೆಯಿಂದ ಹೊರಗೆ ಯಾರೂ ಬರದಂತೆ ಸೂಚನೆಯನ್ನೂ ನೀಡಲಾಗಿದೆ. ಒಂದೆರೆಡು ದಿನ ಸುಮ್ಮನಿದ್ದ ಜನ ಇದೀಗ ಔಷಧ, ತರಕಾರಿ ಖರೀದಿ ನೆಪದಲ್ಲಿ ಬೀದಿಗೆ ಇಳಿಯುತ್ತಿದ್ದಾರೆ. ಸವೋದಯ ವೃತ್ತದ ಬಳಿ ಬಾರಾಕೊಟ್ರಿ ಕ್ರಾಸ್ನಲ್ಲಿ ಸೋಮವಾರ ಗುಂಪು ಗುಂಪಾಗಿ ಜನ ಓಡಾಡುತ್ತಿದ್ದರು.
ರಮೇಶ ಭವನದ ಕಡೆಗೆ ಕೆಲವರು ಬ್ಯಾರಿಕೇಡ್ ಒಳಗೆ ನುಸುಳಿ ಓಡಾಡುತ್ತಿದ್ದ ದೃಶ್ಯ ಕಂಡುಬಂತು. ಯಾಕೆ ಓಡಾಡುತ್ತಿದ್ದೀರಿ ಎಂದು ಕೇಳಿದರೆ, ‘ಔಷಧ ತರೋಕ ಬಂದೀನಿ ರೀ ಯಪ್ಪ. ನಮ್ಮ ಮನ್ಯಾಗ ಹುಡುಗರು ಇಲ್ಲ ಅದಕ್ಕ ನಾನ ಬಂದೇನಿರೀ’ ಅಂತಾ ಉತ್ತರಿಸಿದರು. ಮತ್ತೊಬ್ಬರು ರೇಷನ್ ತರಾಕ ಬಂದೇನ್ರಿ ಎಂದು ಮುಂದಕ್ಕೆ ಹೆಜ್ಜೆ ಹಾಕಿದರು.
ಸ್ಯಾನಿಟೈಸೇಶನ್
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮಧುರಾ ಕಾಲನಿಯ ನಿವಾಸದ ಸುತ್ತಮುತ್ತ ಅಗ್ನಿಶಾಮಕ ದಳ ಸಿಬ್ಬಂದಿ ಸೋಮವಾರ ಸ್ಯಾನಿಟೈಸೇಶನ್ ಮಾಡಿದರು. ರಸ್ತೆಯ ಅಕ್ಕಪಕ್ಕ, ಚರಂಡಿ ಮೇಲೆ ವೈರಸ್ ಕೊಲ್ಲುವ ರಸಾಯನಿಕ ಸಿಂಪಡಿಸಿದರು.
ಪೊಲೀಸರು ಸುಸ್ತು
ಜನರನ್ನು ನಿಯಂತ್ರಿಸುವ ಸಲುವಾಗಿ ಸೀಲ್ಡೌನ್ ಪ್ರದೇಶದಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರು ಸುಸ್ತಾಗಿದ್ದಾರೆ. ಎಷ್ಟು ಬಾರಿ ಹೇಳಿದರೂ ಕೇಳದ ಜನ ಇಲ್ಲಸಲ್ಲದ ನೆಪ ಹೇಳಿಕೊಂಡು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾರೆ. ಎಲ್ಲಿಗೆ ಹೊರಟಿದ್ದೀರಿ ? ಯಾಕೆ ಹೊರಟಿದ್ದೀರಿ ? ಮನೆಯಲ್ಲೇ ಇರಿ, ಇದು ಸೀಲ್ಡೌನ್ ಪ್ರದೇಶ ಎಂದು ಹೇಳಿ ಹೇಳಿ ಪೊಲೀಸರ ಧ್ವನಿ ಸಣ್ಣದಾಗಿದೆ. ಬಾಯಿ ಮಾತಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ. ಬೇರೆ ಯಾವ ಅಸ್ತ್ರ ಪ್ರಯೋಗಿಸಿದರೂ ಬೊಬ್ಬೆ ಹೊಡೆಯುತ್ತಾರೆ. ಹೀಗಾಗಿ ಪೊಲೀಸರು ಬೇಸರಗೊಂಡಿದ್ದಾರೆ.